ಕರಾವಳಿ

ಮಳೆಗಾಲದಲ್ಲಿ ವಿಪತ್ತು ನಿರ್ವಹಣೆಗೆ ಜಿಲ್ಲಾಡಳಿತ ಸಿದ್ಧ : ರಕ್ಷಣಾ ಸಾಮಾಗ್ರಿ ವಿತರಿಸಿ ಸಚಿವ ಕೋಟ

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಮಳೆಗಾಲದಲ್ಲಿ ಉಂಟಾದ ತೀವ್ರ ಹಾನಿಯನ್ನು ಮನಗಂಡು ಜಿಲ್ಲಾಡಳಿತವು ಪ್ರಸಕ್ತ ವರ್ಷದಲ್ಲಿ ಉಂಟಾಗಬಹುದಾದ ವಿಪತ್ತು ಎದುರಿಸಲು ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಅವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಎಂ.ಆರ್.ಪಿ.ಎಲ್. ನೆರವಿನೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಖರೀದಿಸಿದ ವಿಪತ್ತು ನಿರ್ವಹಣೆಗೆ ಅನುಕೂಲವಾಗುವಂತಹ ರಕ್ಷಣಾ ಸಾಮಾಗ್ರಿಗಳನ್ನು ವಿವಿಧ ಇಲಾಖೆಗಳಿಗೆ ಹಸ್ತಾಂತರಿಸಿ ಮಾತನಾಡಿದರು.

ಹಿಂದಿನ ವಿಪತ್ತುಗಳು ಭವಿಷ್ಯದಲ್ಲಿ ಅವುಗಳ ನಿರ್ವಹಣೆಗೆ ಅನುಭವ ನೀಡುತ್ತದೆ. ಈ ನಿಟ್ಟಿನಲ್ಲಿ ವಿಪತ್ತುಗಳ ಸಂದರ್ಭದಲ್ಲಿ ಸಾರ್ವಜನಿಕರ ಜೀವಹಾನಿ ರಕ್ಷಣೆಗೆ ಯಾವುದೇ ಸಮಸ್ಯೆ ಬಾರದಂತೆ, ಮುಂಚೂಣಿ ಇಲಾಖೆಗಳಿಗೆ ರಕ್ಷಣಾ ಸಾಮಾಗ್ರಿಗಳನ್ನು ಖರೀದಿಸಿ ನೀಡಲಾಗುತ್ತಿದೆ. ಇದು ರಕ್ಷಣಾ ಕಾಯಾಚರಣೆಗೆ ಹೆಚ್ಚು ಬಲ ನೀಡಲಿದೆ ಎಂದು ಸಚಿವರು ಹೇಳಿದರು.

ಇದೇ ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಸಾಮಾಗ್ರಿಗಳನ್ನು ಖರೀದಿಸಲು ಎಂ.ಆರ್.ಪಿ.ಎಲ್. ಸಿಎಸ್‌ಆರ್ ನಿಧಿಯಿಂದ 1 ಕೋಟಿ ರೂ. ನೆರವು ಮಂಜೂರು ಮಾಡಿದ ಎಂ.ಆರ್.ಪಿ.ಎಲ್. ನಿರ್ದೇಶಕ ಸಂಜಯ್ ವರ್ಮಾ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ, ಶಾಸಕರಾದ ಉಮಾನಾಥ ಕೋಟ್ಯಾನ್, ಸಂಜೀವ ಮಠಂದೂರು, ಎಸ್.ಎಲ್. ಭೋಜೇಗೌಡ, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೇಯರ್ ದಿವಾಕರ್, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ತಕ್ಷೀಲ್ ಸಂಸ್ಥೆಯ ಹರೀಶ್ ಮತ್ತಿತರರು ಇದ್ದರು.

ಅಪರ ಜಿಲ್ಲಾಧಿಕಾರಿ ರೂಪಾ ಸ್ವಾಗತಿಸಿ, ಡಿಡಿಎಂಎ ಅಧಿಕಾರಿ ವಿಜಯಕುಮಾರ್ ವಂದಿಸಿದರು. ನಿರ್ಮಿತಿ ಕೇಂದ್ರದ ಇ.ಡಿ. ರಾಜೇಂದ್ರ ಕಲ್ಬಾವಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ತುರ್ತು ಸಂದರ್ಭದಲ್ಲಿ ಬಳಸಲು ೬ ಬೋಟುಗಳು, 5 ಬೋಟು ಇಂಜಿನ್‌ಗಳು, ಮರ ಕಟ್ ಮಾಡುವ ಯಂತ್ರಗಳು, ರಾಸಾಯನಿಕ ದುರಂತ ಸಂದರ್ಭದಲ್ಲಿ ಬಳಸುವ ಮಾಸ್ಕ್ಗಳು, ಸರ್ಚ್ ಲೈಟ್‌ಗಳು, ಗಾಯಳುಗಳನ್ನು ಸಾಗಿಸುವ ಸ್ಟೆçಚ್ಚರ್‌ಗಳು ಸೇರಿದಂತೆ ವಿವಿಧ ರಕ್ಷಣಾ ಸಾಮಾಗ್ರಿಗಳನ್ನು ಪೊಲೀಸ್, ಅಗ್ನಿಶಾಮಕ, ಹೋಂಗಾರ್ಡ್, ಮಹಾನಗರಪಾಲಿಕೆ ಇಲಾಖೆಗಳಿಗೆ ಹಸ್ತಾಂತರಿಸಲಾಯಿತು.

Comments are closed.