ಕರಾವಳಿ

ಮಂದಾರ ಕೇಶವ ಭಟ್‌ ಅವರ ದುಸ್ಥಿತಿಯಲ್ಲಿರುವ ಮನೆಯ ಸ್ಥಳಾಂತರಕ್ಕೆ ಹಾಗೂ ಸ್ಮಾರಕಕ್ಕೆ ಸಾಹಿತ್ಯಾಸಕ್ತರ ಆಗ್ರಹ

Pinterest LinkedIn Tumblr

ಮಂಗಳೂರು: ಪಚ್ಚನಾಡಿಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿನ ಭೂಕುಸಿತದಿಂದ ಅಪಾಯಕ್ಕೆ ಸಿಲುಕಿರುವ ಸಾಹಿತಿ ಮಂದಾರ ಕೇಶವ ಭಟ್‌ ಅವರ ಮನೆಯನ್ನು ಸಂರಕ್ಷಿಸಿ, ಸ್ಮಾರಕ ನಿರ್ಮಿಸುವಂತೆ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮಂದಾರ ಕೇಶವ ಭಟ್‌ ಕನ್ನಡ, ತುಳು ಮತ್ತು ಮರಾಠಿ ಭಾಷೆಯಲ್ಲಿ ಪ್ರಸಿದ್ಧ ಬರಹಗಾರರಾಗಿದ್ದು, ಭಾಷಾ ಸಮ್ಮಾನ್‌ ಪ್ರಶಸ್ತಿ ಪಡೆದ ಮೊದಲ ಸಾಹಿತಿ. ತುಳು ಭಾಷೆಯಲ್ಲಿ ಅವರು ರಚಿಸಿದ್ದ ‘ಮಂದಾರ ರಾಮಾಯಣ’ ತುಳು ಸಾಹಿತ್ಯ ಕ್ಷೇತ್ರದ ಪ್ರಮುಖ ಕೃತಿಯಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ,‘ಕಳೆದ ಮಳೆಗಾಲದಲ್ಲಿ ಪಚ್ಚನಾಡಿಯಲ್ಲಿ ಸಂಭವಿಸಿದ ಕುಸಿತದಿಂದ ಶತಮಾನದ ಹಿಂದಿನ ಮಂದಾರ ಕೇಶವ ಭಟ್‌ ಮನೆಗೆ ಹಾನಿಯಾಗಿದೆ. ಮನೆಯ ಸುತ್ತಲೂ ಘನತ್ಯಾಜ್ಯ ಆವರಿಸಿರುವುದರಿಂದ ದುರಸ್ತಿ ಮಾಡುವುದೂ ಸಾಧ್ಯವಾಗುವುದಿಲ್ಲ’ ಎಂದರು.

ಈ ಮನೆಯನ್ನು 1919ರಲ್ಲಿ ನಿರ್ಮಿಸಿದ್ದು, 2019ರಲ್ಲಿ ಶತಮಾನ ತುಂಬಿತ್ತು. 2019ರಲ್ಲಿ ಕೇಶವ ಭಟ್‌ ಅವರ ಜನ್ಮದಿನೋತ್ಸವದ ಆಚರಣೆಗೆ ಸಾಹಿತ್ಯ ಪ್ರೇಮಿಗಳು ಮತ್ತು ಲೇಖಕರ ಕುಟುಂಬದವರು ಸಿದ್ಧತೆ ನಡೆಸುತ್ತಿದ್ದಾಗಲೇ ತ್ಯಾಜ್ಯದ ರಾಶಿ ಕುಸಿತದ ದುರಂತ ಸಂಭವಿಸಿತು. ಲೇಖಕರ ಮನೆಯನ್ನು ಸ್ಥಳಾಂತರಿಸಿ, ಸ್ಮಾರಕವಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.

‘ಒಂದು ಶತಮಾನದಷ್ಟು ಹಳೆಯದಾದ ಕೇಶವ ಭಟ್‌ ಮನೆ ತುಳು ನಾಡಿನ ವಾಸ್ತು ಶೈಲಿಗೆ ಉದಾಹರಣೆಯಾಗಿ ಇತ್ತು. ಮನೆಯಲ್ಲಿ ಧರ್ಮ ಚಾವಡಿಯೂ ಇದ್ದು, ಕೋಲ ಮತ್ತಿತರ ಸಂದರ್ಭಗಳಲ್ಲಿ ಇಲ್ಲಿ ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಗುತ್ತಿತ್ತು.

ತ್ಯಾಜ್ಯದ ರಾಶಿಯ ಕುಸಿತದಿಂದ ಮಂದಾರದ 27 ಮನೆಗಳು, ದೈವಸ್ಥಾನ, ನಾಗಬನ, 12 ಎಕರೆಕೃಷಿ ಜಮೀನಿಗೆ ಹಾನಿಯಾಗಿದೆ. ಎಲ್ಲ ಮನೆಗಳ ಪುನರ್‌ ನಿರ್ಮಾಣ ಮಾಡಿ, ದೈವಸ್ಥಾನ ಮತ್ತು ನಾಗಬನಗಳನ್ನೂ ಪುನರುಜ್ಜೀವನ ಮಾಡಬೇಕು. ಕುಪ್ಪಳಿಯಲ್ಲಿ ಕುವೆಂಪು ಅವರ ಮತ್ತು ಧಾರವಾಡದಲ್ಲಿ ಬೇಂದ್ರೆ ಅವರ ಸ್ಮಾರಕಗಳನ್ನು ನಿರ್ಮಿಸಿರುವ ಮಾದರಿಯಲ್ಲೇ ಮಂದಾರದಲ್ಲಿ ಕೇಶವ ಭಟ್‌ ಸ್ಮಾರಕವನ್ನೂ ನಿರ್ಮಿಸಬೇಕು’ಎಂದು ಜೋಶಿ ಒತ್ತಾಯಿಸಿದರು.

ಸಾಹಿತಿ ಪ್ರೊ.ಚಂದ್ರಕಲಾ ನಂದಾವರ ಮಾತನಾಡಿ, ‘ಮಂದಾವರ ಕೇಶವ ಭಟ್‌ ತುಳುನಾಡಿನ ಹೆಮ್ಮೆ. ಇಂತಹ ಸಾಹಿತಿಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಕಡೆಗಣಿಸಬಾರದು’ ಎಂದರು.

ಸಾಹಿತಿ – ಸಂಘಟಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ’ ತುಳು ಮಹಾಕವಿ ಮಂದಾರ ಕೇಶವ ಭಟ್ಟರು ತಮ್ಮ ಕೃತಿಗಳಿಂದ ಅಮರರು. ಮುಂದಿನ ತಲೆಮಾರು ಅವರನ್ನು ನೆನಪಿಸಿಕೊಳ್ಳುವಂತಾಗಲು ಅವರು ಬಾಳಿ ಬೆಳೆದ ಮನೆಯ ಪರಿಸರದಲ್ಲಿ ಶಾಶ್ವತ ಸ್ಮಾರಕ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ದೊಂದಿಗೆ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ’ ಎಂದರು.

‘ಸ್ಮಾರ್ಟ್‌ ಸಿಟಿ ಹಣ ಬಳಸಿ’

‘ಸ್ಮಾರ್ಟ್‌ ಸಿಟಿ ಯೋಜನೆಯ ಅನುದಾನವನ್ನು ಬಳಸಿಕೊಂಡು ಮಂದಾರ ಕೇಶವ ಭಟ್‌ ಅವರ ಸ್ಮಾರಕ ನಿರ್ಮಿಸಬಹುದು. ಆ ಸ್ಮಾರಕದ ಮೂಲಕ ಸಾಹಿತ್ಯ ಚಟುವಟಿಕೆಕೆ ಪ್ರೋತ್ಸಾಹ ನೀಡುವ ಕೆಲಸವನ್ನೂ ಮಾಡಬಹುದು’ ಎಂದು ಕನ್ನಡ ಸಾಹಿತ್ಯ ಪರಿಷತ್‌ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಹೇಳಿದರು.

ಸ್ಮಾರಕ :ರಾಜ್ಯ ಸರ್ಕಾರಕ್ಕೆ ಮನವಿ:

ಕನಿಷ್ಠ ಒಂದು ಎಕರೆ ಜಮೀನು ಗುರುತಿಸಿ, ಸ್ಮಾರಕ ನಿರ್ಮಿಸುವಂತೆ ಜನಪ್ರತಿನಿಧಿಗಳು ಹಾಗೂ ರಾಜ್ಯ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದೇವೆ : ಪ್ರಮೋದ್‌ ಸಪ್ರೆ, ಮಂದಾರ ಕೇಶವ ಭಟ್‌ ಅವರ ಮೊಮ್ಮಗ.

Comments are closed.