ಮಂಗಳೂರು, ಜೂನ್.29: ದ. ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೊಂದು ಮಹಿಳೆ ಬಲಿಯಾಗಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಳ್ಳಾಲದ 60 ವರ್ಷದ ವೃದ್ಧೆ ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಈ ಮೂಲಕ ಕೊರೋನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೇರಿದೆ.
ಮಂಗಳೂರಿನ ಉಳ್ಳಾಲ ನಿವಾಸಿ 60 ವರ್ಷದ ವೃದ್ದೆ ಕೆಲವು ದಿನಗಳ ಹಿಂದೆ ಸೋಂಕಿಗೆ ತುತ್ತಾಗಿದ್ದು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರು ಲಿವರ್, ಡಯಾಬಿಟಿಸ್ ಮತ್ತು ಹೃದಯ ಖಾಯಿಲೆಯಿಂದಲೂ ಬಳಲುತ್ತಿದ್ದರು ಎಂದು ಹೇಳಲಾಗಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಭಾನುವಾರ ಒಂದು ದಿನವೇ ಮೂವರು ಕೊರೊನಾ ಸೋಂಕಿತರು ಸಾವನ್ನಪ್ಪಿದ್ದು ಇದೀಗ 24 ಗಂಟೆಗಳ ಒಳಗಾಗಿ ಕೊರೊನಾ ಸೋಂಕಿಗೆ ಮತ್ತೊಂದು ಬಲಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಜೊತೆಗೆ ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ.
Comments are closed.