ಕರಾವಳಿ

ಮಂಗಳೂರಿನಲ್ಲಿ ಮೀನಿನ ಚಿತ್ರವಿರುವ ಅಂಚೆ ಚೀಟಿ ಬಿಡುಗಡೆ

Pinterest LinkedIn Tumblr

ಮಂಗಳೂರು ಜುಲೈ 02 : ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯವು 50 ವರ್ಷಗಳನ್ನು ಪೂರೈಸಿದ ಸುಸಂದರ್ಭದಲ್ಲಿ ಮುದ್ರಿಸಲಾದ ಮೀನಿನ ಚಿತ್ರವಿರುವ ಭಾರತೀಯ ಅಂಚೆ ಚೀಟಿಯನ್ನು ಮೀನುಗಾರಿಕೆ, ಬಂದರು, ಒಳನಾಡು ಜಲ ಸಾರಿಗೆ ಮತ್ತು ದ.ಕ. ಜಿಲ್ಲೆಯ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಮೀನು ಒಂದು ಉತ್ಕøಷ್ಟ ಪೌಷ್ಟಿಕಾಂಶವನ್ನು ಹೊಂದಿರುವ ಜೀವಿ. ಮೀನನ್ನು ಸೇವಿಸುವವರು ಮತ್ತು ಅದರ ಪರಿಮಳವನ್ನು ಹೀರುವವರ ಆರೋಗ್ಯ ಉತ್ತಮ ವಾಗಿರುವುದಲ್ಲದೇ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಿದರು. ಕರಾವಳಿ ಪ್ರದೇಶದಲ್ಲೊಂದೇ ಅಲ್ಲದೆ, ಒಳನಾಡು ಮೀನುಗಾರಿಕೆಗೂ ಸಹಾ ಆದ್ಯತೆ ನೀಡಬೇಕು ಮತ್ತು ಮೀನಿನ ಸಂತತಿ ಹೆಚ್ಚಿಸಬೇಕಾಗಿರುವುದು ಅನಿವಾರ್ಯವಿದೆ ಎಂದು ಅಭಿಪ್ರಾಯಪಟ್ಟರು.

ಪಂಜರಗಳಲ್ಲಿ ಮೀನು ಸಾಕಣೆ ಮಾಡಿದರೆ ಉತ್ಪಾದನೆಯನ್ನು ಹೆಚ್ಚಿಸಬಹುದಾದ ತಾಂತ್ರಿಕತೆಯನ್ನು ವಿಜ್ಞಾನಿಗಳು ಕೃಷಿಕರಿಗೆ ನೀಡಬೇಕಾಗಿದೆ. ಕೇಂದ್ರ ಸರ್ಕಾರದಿಂದ ಬಿಡುಗಡೆಗೊಂಡ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಇಂತಹ ಪದ್ದತಿಗಳಿಗೆ ಪ್ರೋತ್ಸಾಹ ಕೊಡಬೇಕಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಮೀನಿನ ಅಂಚೆ ಚೀಟಿ ಹೊರತರುವುದು ಕಷ್ಟಕರವಾದ ವಿಷಯ ಮತ್ತು ಕಾಲೇಜಿನ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ತಯಾರಿಸಿದ ಪೆÇೀಸ್ಟ್ ಸ್ಟಾಂಪ್ ಮೀನುಗಾರಿಕಾ ರಂಗದಲ್ಲಿ ಹೆಮ್ಮೆಯ ವಿಷಯವೆಂದು ಹೇಳಿದರು.

ಸಮುದ್ರ ಕಳೆ (ಸೀವೀಡ್) ಬೆಳೆಯುವ ತಂತ್ರಜ್ಞಾನವನ್ನು ಅಳವಡಿಸುವುದು ಅನಿವಾರ್ಯವಾಗಿರುತ್ತದೆ. ಈ ಸೀವೀಡ್ ಎಂಬುದು ಆಹಾರ ಸೇವನೆಯಲ್ಲಿ ಮಹತ್ತರ ಪಾತ್ರವಹಿಸುತ್ತದೆ ಮತ್ತು ಇದರಿಂದ ಔಷದ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಆದುದರಿಂದ ಇಂತಹ ಜಲ ಸಸ್ಯಗಳನ್ನು ಬೆಳಸುವುದರಿಂದ ಕರಾವಳಿ ತೀರಪ್ರದೇಶದಲ್ಲಿ ವಾಸಿಸುವ ಮೀನುಗಾರ ಬಾಂಧವರಿಗೆ ಒಂದು ಉಪಕಸುಬಾಗಿ ಲಾಭದಾಯಕ ಉದ್ಯೋಗವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಲೇಜಿನ ಡೀನ್ ಡಾ. ಎ. ಸೆಂಥಿಲ್ ವೇಲ್ ಪ್ರಾಸ್ತಾವಿಕ ಮಾತನಾಡಿ, ಅಂಚೆ ಇಲಾಖೆಯ ಸಹಕಾರದಿಂದ ಕರ್ನಾಟಕ ರಾಜ್ಯದ ಸ್ಥಳಿಯ ಮೀನಾದ ಪಂಟಿಯಸ್ ಕಾರ್ನಾಟಿಕಸ್ ನ್ನು ಅಂಚೆ ಚೀಟಿಯ ಮೂಲಕ ಮುದ್ರಿಸಲು ಸಹಕರಿಸಿದ್ದಕ್ಕೆ ಕೃತಜ್ಞತೆಗಳನ್ನು ತಿಳಿಸಿದರು. ಮೀನುಗಾರಿಕಾ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಮುದ್ರಿಸಲ್ಪಟ್ಟ ಅಂಚೆ ಚೀಟಿಯು ಭಾರತ ದೇಶಕ್ಕೆ ಒಂದು ಕೊಡುಗೆ ಮತ್ತು ನೆನಪು ಎಂದು ಹೇಳಿದರು.

ಅತಿಥಿಗಳನ್ನು ಸ್ವಾಗತಿಸಿ ನಿರೂಪಣೆ ಮಾಡಿದ ಕಾಲೇಜಿನ ಜಲಪರಿಸರ ವಿಭಾಗದ ಪ್ರೋಫೆಸರ್ ಡಾ. ಎ.ಟಿ. ರಾಮಚಂದ್ರ ನಾಯ್ಕ ಮಾತನಾಡಿ, ಪಶ್ಚಿಮ ಘಟ್ಟದ ಅಳಿವೆ ಪ್ರದೇಶದಲ್ಲಿ ಯೆಥೇಚ್ಚವಾಗಿ ಬೆಳೆಯುವ ಕರ್ನಾಟಕ ರಾಜ್ಯದ ಮೀನೆಂದು ಕರೆಯಲ್ಪಡುವ ಸ್ಥಳೀಯ ಮೀನಾದ ಪಂಟಿಯಸ್ ಕಾರ್ನಾಟಿಕಸ್ ನ್ನು ಭಾರತೀಯ ಅಂಚೆ ಇಲಾಖೆಯವರು ಅಂಚೆ ಚೀಟಿಯ ಮೇಲೆ ಮುದ್ರಿಸಿರುವುದು ಮೀನುಗಾರಿಕಾ ಕಾಲೇಜಿಗೆ ಹೆಮ್ಮೆ ಎಂದು ಪ್ರಶಂಶಿಸಿದರು.

ಮಂಗಳೂರು ಮಹಾನಗರಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ್, ಉಪಮೇಯರ್ ವೇದಾವತಿ, ಕಾರ್ಪೊರೇಟರ್ ರೇವತಿ ಶ್ಯಾಮಸುಂದರ್ ಮತ್ತು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಡಾ. ಕುಮಾರನಾಯ್ಕ ಎ,ಎಸ್. ವಂದಿಸಿದರು.

Comments are closed.