ಮಂಗಳೂರು, ಜುಲೈ.12: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಪತ್ರಕರ್ತರಿಗೆ ಭಾನುವಾರ ಕೊರೋನಾ ಸೋಂಕು ಧೃಢಪಟ್ಟಿದ್ದು, ಸೋಂಕು ತಗುಲಿರುವ ಇಬ್ಬರೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಪ್ರಕರಣ ಹೆಚ್ಚುತ್ತಿದ್ದು, ಕೋವಿಡ್ ನಡುವೆಯೂ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯದ ಸುದ್ದಿವಾಹಿನಿಗಳ ದ.ಕ. ಜಿಲ್ಲಾ ಕ್ಯಾಮರಮ್ಯಾನ್ ಗಳಿಬ್ಬರಿಗೆ ಕೊರೋನ ಸೋಂಕು ತಗುಲಿದೆ.
ಮಂಗಳೂರಿನಲ್ಲಿ ಈ ಹಿಂದೆ ಎಲ್ಲಾ ಪತ್ರಕರ್ತರಿಗೆ ಕೊರೋನಾ ಪರೀಕ್ಷೆ ನಡೆಸಿದಾಗ ಇವರಿಬ್ಬರ ವರದಿ ನೆಗೆಟಿವ್ ಬಂದಿತ್ತು. ಆದರೆ, ಕೆಲದಿನಗಳ ಹಿಂದೆ ಇವರಲ್ಲಿ ಕೊರೋನಾ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತ್ತೆ ಪರೀಕ್ಷೆ ನಡೆಸಲಾಗಿತ್ತು. ಇಂದು ಇವರಿಬ್ಬರ ಪರೀಕ್ಷಾ ವರದಿ ಬಂದಿದ್ದು, ಇಬ್ಬರಿಗೂ ಕೊರೋನಾ ಸೋಂಕು ಇರುವುದು ಧೃಢಪಟ್ಟಿದೆ.
ಆತಂಕ ಬೇಡ, ಆದರೆ ಮುಂಜಾಗ್ರತೆ, ಸುರಕ್ಷತೆ ಅಗತ್ಯ: ಇಂದಾಜೆ
ಕೋವಿಡ್ 19 ಕೊರೊನಾ ವೈರಸ್ ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಹರಡುತ್ತಿದೆ. ನಗರದಲ್ಲಿ ಇಬ್ಬರು ಪತ್ರಕರ್ತ ಮಿತ್ರರಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಅವರ ಚಿಕಿತ್ಸೆಗೆ ಸಂಬಂಧಪಟ್ಟಂತೆ ಈಗಾಗಲೇ ಖಾಸಗಿ ಆಸ್ಪತ್ರೆ ಮುಖ್ಯಸ್ಥರು, ಉಸ್ತುವಾರಿ ಸಚಿವರು, ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾಧಿಕಾರಿ ಜತೆ ಮಾತನಾಡಲಾಗಿದೆ ಎಂದು ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್ ಇಂದಾಜೆ ತಿಳಿಸಿದ್ದಾರೆ.
ಚಿಕಿತ್ಸೆ ಪಡೆಯುತ್ತಿರುವ ಪತ್ರಕರ್ತರು ಶೀಘ್ರ ಗುಣಮುಖರಾಗಿ ಬರಲೆಂದು ನಾವೆಲ್ಲರೂ ಪ್ರಾರ್ಥಿಸೋಣ. ಇನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ಪರಿಸ್ಥಿತಿ ಎದುರಾಗುವ ಸಾಧ್ಯತೆಯಿದೆ, ನಾವೆಲ್ಲರೂ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಕೋವಿಡ್ ಬಗ್ಗೆ ಯಾರೂ ಆತಂಕ ಪಡುವುದು ಬೇಡ, ಆದರೆ ಮುಂಜಾಗ್ರತೆ, ಸುರಕ್ಷತೆ ಅಗತ್ಯ ಎಂದು ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.