ಕರಾವಳಿ

ಎನ್ಐಟಿಕೆ- 3ಡಿ ಮುದ್ರಣ ಕ್ಷೇತ್ರದಲ್ಲಿ ಇಂಟರ್ನ್‌ಶಿಪ್‌ಗೆ ಅವಕಾಶ : ಪ್ರೊ.ಕೆ.ಉಮಾಮಹೇಶ್ವರ ರಾವ್

Pinterest LinkedIn Tumblr

ಮಂಗಳೂರು ಜುಲೈ 19 : ಎನ್‍ಐಆರ್‍ಎಫ್  ಶ್ರೇಯಾಂಕದಲ್ಲಿ ದೇಶದಲ್ಲಿ 13 ನೇ ಸ್ಥಾನವನ್ನು ಹೊಂದಿರುವ ಕರ್ನಾಟಕದ ಪ್ರಮುಖ ತಾಂತ್ರಿಕ ಸಂಸ್ಥೆಯಾದ ಕರ್ನಾಟಕದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್ಐಟಿಕೆ)ಯು ಹಗುರವಾದ ಸಂಯೋಜನೆಗಳ 3ಡಿ ಮುದ್ರಣ ಕ್ಷೇತ್ರದಲ್ಲಿ ಪರಿಣತಿಯನ್ನು ಸಾಬೀತುಪಡಿಸಿದೆ.

ನ್ಯೂಯಾರ್ಕ್ ವಿಶ್ವವಿದ್ಯಾಲಯ (ಎನ್ ವೈಯು)ನೊಂದಿಗೆ ಎನ್‍ಐಟಿಕೆ ಸಹಯೋಗದ ಯೋಜನೆಯು ಯುನೈಟೆಡ್ ಸ್ಟೇಟ್ಸ್‍ನ ನ್ಯಾಷನಲ್ ಸೈನ್ಸ್ ಫೌಂಡೇಶನ್ (ಎನ್ಎಸ್ಎಫ್) ನಿಂದ ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಸಂಶೋಧನಾ ಅನುಭವ (ಐಆರ್ ಇಎಸ್) ಅನುದಾನವನ್ನು ಪಡೆದಿದೆ. ಈ ಮೂಲಕ ಪ್ರತಿ ಬೇಸಿಗೆ ಅವಧಿಯಲ್ಲಿ ಇಂಟರ್ನ್ ಶಿಪ್ ಗೆ ಎನ್ಐಟಿಕೆ ಯಲ್ಲಿ 6 ಯು.ಎಸ್.ಎ ವಿದ್ಯಾರ್ಥಿಗಳಿಗೆ ಆತಿಥ್ಯ ವಹಿಸಲು 3 ವರ್ಷಗಳ ಅವಧಿಗೆ 2 ಕೋಟಿ ರೂಪಾಯಿ ಅನುದಾನ ನೀಡಲಾಗುತ್ತದೆ.

ಸಾಮಾಜಿಕ ಅಗತ್ಯಗಳಿಗಾಗಿ ಕಾರ್ಯಸಾಧ್ಯವಾದ ಪರಿಹಾರಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿ 3ಡಿ ಮುದ್ರಣದಲ್ಲಿ ಹೊಸ ಮಾರ್ಗಗಳನ್ನು ಅನ್ವೇಷಿಸಲು ಎರಡೂ ದೇಶಗಳ ವಿದ್ಯಾರ್ಥಿಗಳಿಗೆ ಇದು ಒಂದು ಉತ್ತಮ ಅವಕಾಶವಾಗಿದೆ ಎಂದು ಎನ್‍ಐಟಿಕೆ ನಿರ್ದೇಶಕ ಪ್ರೊ. ಕೆ ಉಮಾಮಹೇಶ್ವರ ರಾವ್ ಹೇಳಿದ್ದಾರೆ.

ಡಾ.ಮೃತ್ಯುಂಜಯ ದೊಡ್ಡಮನಿ (ಎನ್ಐಟಿಕೆ) ಮತ್ತು ಪ್ರೋ. ನಿಖಿಲ್ ಗುಪ್ತಾ (ಎನ್ ವೈಯು) ಆಯಾ ದೇಶಗಳಲ್ಲಿ ಈ ಕಾರ್ಯಕ್ರಮವನ್ನು ನಿರ್ದೇಶಿಸಲಿದ್ದಾರೆ. 3ಡಿ ಮುದ್ರಣ ಸಂಶೋಧನೆಯನ್ನು ಪ್ರಯೋಗಾಲಯದಿಂದ ಕೈಗಾರಿಕಾ-ಪ್ರಮಾಣದ ಸಾಕ್ಷಾತ್ಕಾರಕ್ಕೆ ತೆಗೆದುಕೊಳ್ಳುವ ಸಮಗ್ರ ಅನುಭವವನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಉದ್ದೇಶ ಈ ಯೋಜನೆಯದ್ದಾಗಿದೆ. ಈ ಸಹಕಾರಿ ಯೋಜನೆಯು ಎನ್‍ಐಟಿಕೆ; ಎನ್‍ವೈಯು, ನ್ಯೂಯಾರ್ಕ್, ಯುಎಸ್‍ಎ; ನ್ಯೂಯಾರ್ಕ್ ಸಿಟಿ ಕಾಲೇಜ್ ಆಫ್ ಟೆಕ್ನಾಲಜಿ (ಸಿಟಿಟೆಕ್), ಯುಎಸ್‍ಎ; ಐಐಟಿ ಕಾನ್ಪುರ್ (ಐಐಟಿಕೆ) ಮತ್ತು ಆಹಾ 3ಡಿ ಇನ್ನೋವೇಶನ್ಸ್ ಪ್ರೈ. ಲಿಮಿಟೆಡ್, ಜೈಪುರ, ಇವುಗಳನ್ನು ಒಳಗೊಂಡಿದೆ.

ಡಾ.ಗಫರ್ ಗೈಲಾನಿ (ಸಿಟಿಟೆಕ್), ಡಾ.ಜಯರಾಜ್ ಪಿಚೈಮಾನಿ (ಎನ್ಐಟಿಕೆ), ಪ್ರೋ. ಆನಂದನ್ ಶ್ರೀನಿವಾಸನ್ (ಎನ್ಐಟಿಕೆ), ಪ್ರೋ. ಶಕ್ತಿ ಗುಪ್ತಾ (ಐಐಟಿಕೆ) ಮತ್ತು ಶ್ರೀ ಆಕಾಶ್ (ಆಹಾ 3ಡಿ ) ಈ 3ಡಿ ಮುದ್ರಣ ಯೋಜನೆಯ ತಂಡದ ಇತರ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.

3ಡಿ ಮುದ್ರಣವು ಉತ್ಪಾದನಾ ಸನ್ನಿವೇಶವನ್ನು ಗಣನೀಯವಾಗಿ ವೃದ್ಧಿಪಡಿಸುವ ಸಾಮಥ್ರ್ಯವನ್ನು ಹೊಂದಿದೆ ಎಂದು ಎನ್‍ಐಟಿಕೆಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೋ. ಶ್ರೀಕಾಂತ ರಾವ್ ತಿಳಿಸಿದರು.
ಭಾರತೀಯ ಸಂಸ್ಥೆಗಳ ಪ್ರಯೋಗಾಲಯಗಳಲ್ಲಿ ವಿಶ್ವದಾದ್ಯಂತದ ಉನ್ನತ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ತಾಂತ್ರಿಕ ಮತ್ತು ಸಾಂಸ್ಕೃತಿಕ ಮಾನ್ಯತೆ ನೀಡುವಂತಹ ಕಾರ್ಯಕ್ರಮಗಳ ಅಗತ್ಯವನ್ನು ಡಾ. ಮೃತ್ಯುಂಜಯ ದೊಡ್ಡಮನಿ ವಿವರಿಸಿದರು.

ಪ್ರತಿವರ್ಷ ಎಂಟು ವಾರಗಳ ಬೇಸಿಗೆ ಅವಧಿಯ ಈ ಕಾರ್ಯಕ್ರಮವು 2021 ರಲ್ಲಿ ಪ್ರಾರಂಭವಾಗಲಿದೆ. ಇದು ಎನ್‍ಐಟಿಕೆ ವಿದ್ಯಾರ್ಥಿಗಳಿಗೆ ಯು.ಎಸ್. ವಿದ್ಯಾರ್ಥಿಗಳೊಂದಿಗೆ ಎನ್‍ಐಟಿಕೆ ಪ್ರಯೋಗಾಲಯಗಳಲ್ಲಿ ಸಂಶೋಧನೆ ನಡೆಸಲು ಮತ್ತು ಸಂಶೋಧನೆ, ಉದ್ಯಮ ಮಾನ್ಯತೆ ಮತ್ತು ಸಾಂಸ್ಕೃತಿಕ ಸಂವಹನಗಳಿಗೆ ಅವಕಾಶಗಳನ್ನು ಒದಗಿಸುತ್ತದೆ ಎಂದು ಎನ್ ಐಟಿಕೆ ಸುರತ್ಕಲ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Comments are closed.