ಮಂಗಳೂರು : ಕೊರೋನಾ ಲಾಕ್ ಡೌನ್ ನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದುರುಪಯೋಗ ಪಡಿಸಿಕೊಂಡು ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿದಲ್ಲದೇ ವಿದ್ಯುಚ್ಛಕ್ತಿ ಸರಬರಾಜು ಕಂಪನಿಗಳಲ್ಲಿ ಮೀಟರ್ ರೀಡರ್ ಆಗಿ ದುಡಿಯುತ್ತಿರುವ ಗುತ್ತಿಗೆ ನೌಕರರನ್ನು ಬೀದಿಪಾಲು ಮಾಡಲು ಹೊರಟಿರುವುದು ಖಂಡನೀಯ ಎಂದು ಸಿಐಟಿಯು ಕರ್ನಾಟಕ ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಆರೋಪಿಸಿದರು.
ಅವರು ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡರೇಶನ್ (ಸಿಐಟಿಯು) ವತಿಯಿಂದ ಗುತ್ತಿಗೆ ಆಧಾರಿತ ಮಾಪಕ ಓದುಗರನ್ನು ಕೆಲಸದಿಂದ ಕೈಬಿಡುವ ತೀರ್ಮಾನದ ವಿರುದ್ಧ ಮೆಸ್ಕಾಂ ಕೇಂದ್ರ ಕಛೇರಿ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕೇಂದ್ರ ರಾಜ್ಯ ಸರ್ಕಾರಗಳು ಸರ್ಕಾರಿ ಸ್ವಾಮ್ಯದ ರೈಲ್ವೆ, ವಿಮಾನ , ಬಿಎಸ್ಎನ್ಎಲ್ , ಬ್ಯಾಂಕ್ ಸೇರಿದಂತೆ ಅನೇಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿದೆ. ವಿದ್ಯುತ್ ಕ್ಷೇತ್ರದಲ್ಲೂ ಖಾಸಗೀಕರಣ ನೀತಿಗಳನ್ನು ಜಾರಿಗೆ ತರುವ ಉದ್ದೇಶದಿಂದ ವಿವಾದಿತ ವಿದ್ಯುತ್ ಮಸೂದೆ ಜಾರಿ ಮಾಡಲು ರಾಜ್ಯ ಸರ್ಕಾರ ಹುನ್ನಾರ ನಡೆಸಿದ್ದು , ಇದರ ಪರಿಣಾಮವಾಗಿ ಗುತ್ತಿಗೆ ಆಧಾರಿತ ಓದುಗ ಮಾಪಕರನ್ನು ಕೆಲಸದಿಂದ ಕೈಬಿಟ್ಟು , ಹೆಚ್ಚು ಗಂಟೆಗಳಿಗೆ ಕಡಿಮೆ ವೇತನದಲ್ಲಿ ದುಡಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಮೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ಹಿಂದುತ್ವದ ಹೆಸರಿನಲ್ಲಿ ಗೆದ್ದಿರುವ ಶಾಸಕ, ಸಂಸದರು ಮೆಸ್ಕಾಂ ನೌಕರರ ಸಮಸ್ಯೆಗಳ ಬಗ್ಗೆ ಕಿವುಡರಂತೆ ವರ್ತಿಸುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಮಾತ್ರ ಹಿಂದೂ ನಾವೆಲ್ಲ ಒಂದು ಎಂದು ಅರಚಾಡುತ್ತಾರೆ ಎಂದು ಟೀಕಿಸಿದರು.
ಈಗಿರುವ ಗುತ್ತಿಗೆ ನೌಕರರನ್ನು ಕೈಬಿಟ್ಟರೆ ಇಡೀ ರಾಜ್ಯದಾದ್ಯಂತ ಸಿಐಟಿಯು ಹೋರಾಟಕ್ಕೆ ಕರೆ ನೀಡ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕ ಫೆಡರೇಶನ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ , ನ್ಯಾಯವಾದಿ ಶಿವಕುಮಾರ್ ಎಸ್. ಎಂ ಮಾತನಾಡಿ ಹಲವಾರು ವರ್ಷಗಳಿಂದ ಮೆಸ್ಕಾಂ ವ್ಯಾಪ್ತಿಯಲ್ಲಿ ಮೀಟರ್ ರೀಡಿಂಗ್ ಮಾಡುತ್ತಿದ್ದ ಗುತ್ತಿಗೆ ನೌಕರರನ್ನು ಏಕಾಏಕಿ ಕೈಬಿಡುವ ಮೂಲಕ ರಾಜ್ಯ ಸರ್ಕಾರ ಅನ್ನ ಬಟ್ಟಲಿಗೆ ಕಲ್ಲು ಹಾಕುವ ಅತ್ಯಂತ ನೀಚ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು. ಗುತ್ತಿಗೆದಾರರ ಬದಲಾವಣೆ ಹೆಸರಿನಲ್ಲಿ ಗುತ್ತಿಗೆ ನೌಕರರನ್ನು ಕೈಬಿಟ್ಟರೆ ಮೆಸ್ಕಾಂ ಇಲಾಖೆ ಎದುರು ಅನಿರ್ದಿಷ್ಟಾವಧಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಕರ್ನಾಟಕ ರಾಜ್ಯ ಕಾರ್ಯದರ್ಶಿ ಸಮಿತ್ ಸುಳ್ಯ ಮಾತನಾಡಿದರು.
ಗುತ್ತಿಗೆ ಆಧಾರಿತ ಓದುಗ ಮಾಪಕರನ್ನು ಕೆಲಸದಿಂದ ಕೈಬಿಡಬಾರದು , ಎಪ್ರಿಲ್ ನಿಂದ ತಡೆಗಟ್ಟಿರುವ ವೇತನ ಪಾವತಿಸಬೇಕು , ಈಗಿರುವ ಕೆಲಸದ ಅವಧಿ ವಿಸ್ತರಿಸಬಾರದು , ಈಗಿರುವ ವೇತನವನ್ನು ಕಡಿತ ಗೊಳಿಸಬಾರದು , ಗುತ್ತಿಗೆದಾರರ ಕಿರುಕುಳ ನಿಲ್ಲಿಸಬೇಕು ಎಂದು ಒತ್ತಾಯಿಸಿ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಸ್ನೇಹಲ್ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯ ನೇತೃತ್ವವನ್ನು ಸಿಐಟಿಯು ಮುಖಂಡ ಶೇಖರ್ ಲಾಯಿಲ, ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕ ಫೆಡರೇಶನ್ ನ ಮೆಸ್ಕಾಂ ವ್ಯಾಪ್ತಿಯ ಮುಖಂಡರಾದ ಪ್ರಕಾಶ್ ಧರ್ಮಸ್ಥಳ, ಲೋಕೇಶ್ ಹೆಬ್ಬಾರ್ , ಮೋಹನ್ ನಾಯ್ಕ , ಕೇಶವ ನಾಯ್ಕ , ಗೋಪಾಲಕೃಷ್ಣ ಪ್ರಭು , ಜಯರಾಮ ಬಂಟ್ವಾಳ, ಅಶೋಕ ಶೇರಿಗಾರ್ ಉಡುಪಿ ,ಚಂದ್ರಶೇಖರ ಹೆಬ್ರಿ , ಉದಯ ಕುಮಾರ್ ಕಡಬ , ಅಕ್ಷಯ್ ಪುತ್ತೂರು ವಹಿಸಿದ್ದರು.
Comments are closed.