ಮಂಗಳೂರು, ಆಗಸ್ಟ್,04: ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆ ನಡೆಯಲಿರುವ ಹಿನ್ನಲೆಯಲ್ಲಿ ಯಾವೂದೇ ಅಹಿತಕರ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂದು ಸಂಜೆಯಿಂದ ಆಗಸ್ಟ್ 6ರ ಬೆಳಗ್ಗೆ 6ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಿ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಆದೇಶ ಹೊರಡಿಸಿದ್ದಾರೆ.
ನಾಳೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನಡೆಯಲಿದೆ. ರಾಮ ಮಂದಿರ ನಿರ್ಮಾಣದ ಸಂದರ್ಭದಲ್ಲಿ ದ.ಕ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
ದ.ಕ.ಜಿಲ್ಲೆಯಾದ್ಯಂತ ಇಂದು ಸಂಜೆಯಿಂದ ಆಗಸ್ಟ್ 6ರ ಬೆಳಗ್ಗೆ 6ಗಂಟೆಯವರೆಗೆ ಯಾವೂದೇ ಬಾರ್ & ರೆಸ್ಟೋರೆಂಟ್ ಮತ್ತು ವೈನ್ ಶಾಪ್ ಗಳು ತೆರೆಯುವಂತಿಲ್ಲ ಎಂದು ಅದೇಶದಲ್ಲಿ ತಿಳಿಸಲಾಗಿದೆ.
144 ಸೆಕ್ಷನ್‌ನಂತೆ ನಿಷೇಧಾಜ್ಞೆ ಜ್ಯಾರಿ :
ಈಗಾಗಲೇ ಪೊಲೀಸ್ ಇಲಾಖೆಯು ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಷೆ ವಿಧಿಸಿ ಆದೇಶ ಹೊರಡಿಸಿದೆ. ಹಿಂದೂ ಸಂಘಟನೆಗಳು ಸಂಭ್ರಮಾಚರಣೆ ನಡೆಸಲು ಸಿದ್ದತೆ ನಡೆಸಿದೆ ಹಾಗೂ ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ ನಡೆಸಲು ಸಿದ್ಧತೆ ನಡೆದಿದೆ ಎಂಬ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಮಂಗಳೂರಲ್ಲಿ ಮತೀಯ, ರಾಜಕೀಯ ಗಲಭೆ ಗಳನ್ನು ನಿಯಂತ್ರಿಸಲು ಹಾಗೂ ಸಾರ್ವಜನಿಕ ಪ್ರಾಣ, ಆಸ್ತಿಪಾಸ್ತಿ ಹಾನಿ ತಡೆಗಟ್ಟುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಷೆ ವಿಧಿಸಿರುವುದಾಗಿ ಮಂಗಳೂರು ಪೊಲೀಸ್ ಆಯುಕ್ತ ವಿಕಾಶ್‌ಕುಮಾರ್ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಇಂದು ರಾತ್ರಿ 8ರಿಂದ ಆಗಸ್ಟ್.6ರಂದು ಬೆಳಗ್ಗೆ 6 ಗಂಟೆವರೆಗೆ ಸಿಆರ್‌ಪಿಸಿಯ ಕಲಂ 144 ಸೆಕ್ಷನ್‌ನಂತೆ ನಿಷೇಧಾಜ್ಞೆ ಹೊರಡಿಸಲಾಗಿದೆ.
Comments are closed.