ಉಡುಪಿ: ಬೆಂಗಳೂರಿನ ಡಿ.ಜಿ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಮಂಗಳವಾರ ನಡೆದ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ 110 ಜನರನ್ನು ಈಗಾಗಾಲೇ ಬಂಧಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬುಧವಾರ ಉಡುಪಿಯ ಮಣಿಪಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು ಮೂರು ಮಂದಿ ಗೋಲಿಬಾರಿಗೆ ಸಾವನ್ನಪ್ಪಿದ್ದಾರೆ. ಪ್ರಕರಣದ ತನಿಖೆ ಸ್ವರೂಪವನ್ನು ಸಿಎಂ, ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
ಪೊಲೀಸರ ಸಮಯೋಚಿತ ನಿರ್ಧಾರದಿಂದ ಪುಂಡರ ನಿಗ್ರಹ, ಪರಿಸ್ಥಿತಿ ಹತೋಟಿಗೆ ತೆಗೆದುಕೊಳ್ಳಲು ಸಾಧ್ಯವಾಯಿತು. ಮುಂಜಾಗೃತ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಸಿಸಿಟಿವಿ ಸಹಿತ ದಾಖಲೆಗಳ ಆಧಾರದಲ್ಲಿ ಇನ್ನಷ್ಟು ಬಂಧನ ನಡೆಯಬೇಕಿದ್ದು ಪ್ರಕರಣ ಹಿಂದೆ ಇರುವ ಕಾಣದ ಕೈಗಳನ್ನು ಪತ್ತೆ ಹಚ್ಚಲಾಗುತ್ತಿದೆ.
ಕೇಂದ್ರ ಗೃಹ ಕಾರ್ಯದರ್ಶಿ ಜೊತೆ ಮಾತುಕತೆ ನಡೆಸಿದ್ದು ಹೈದರಾಬಾದ್, ಚೆನ್ನೈನಿಂದ ತಲಾ ಮೂರು ಸಿಆರ್ ಪಿಎಫ್ ತರಿಸಿಕೊಳ್ಳಲಾಗುತ್ತದೆ. ಶಾಂತಿ ಸುವ್ಯವಸ್ಥೆಗೆ ಮೊದಲ ಆದ್ಯತೆ ನೀಡಿದ್ದು ತ್ವರಿತ ಕಾರ್ಯ ಪಡೆ, ಗರುಡ ಪಡೆ ನಿಯೋಜಿಸಲಾಗಿದೆ.
ಇದೊಂದು ಪೂರ್ವ ನಿಯೋಜಿತ ಕೃತ್ಯ. ಫೇಸ್ ಬುಕ್ ಪೋಸ್ಟ್, ಚರ್ಚೆ, ಹಿಂಸಾಚಾರಕ್ಕೆ ಕರೆ ನೀಡಿದ್ದು ಸಮಾಜ ಘಾತುಕ ಶಕ್ತಿಗಳ ಷಡ್ಯಂತ್ರ, ಕುಮ್ಮಕ್ಕು ಕಂಡುಬಂದಿದೆ ಎಂದರು.
Comments are closed.