ಕರಾವಳಿ

ಬರೋಡ ತುಳು ಹಾಗೂ ಕನ್ನಡ ಸಂಘಗಳ ಸ್ಥಾಪಕ ಎಸ್ಕೆ ಹಳೆಯಂಗಡಿ ವಿಧಿವಶ

Pinterest LinkedIn Tumblr

ಮಂಗಳೂರು : ಬರೋಡ ತುಳು ಹಾಗೂ ಕನ್ನಡ ಸಂಘಗಳ ಸ್ಥಾಪಕರೂ, ಪತ್ರಿಕಾರಂಗದಲ್ಲಿ ಭೀಷ್ಮ ಪಿತಾಮಹ ಎಂದೇ ಗುರುತಿಸಲ್ಪಟ್ಟ ಹಿರಿಯ ಚೇತನ ಎಸ್ಕೆ ಹಳೆಯಂಗಡಿಯವರು ದಿನಾಂಕ 01-09-2020ರಂದು ಬರೋಡಾದ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಅವರಿಗೆ84 ವರ್ಷ ವಯಸ್ಸಾಗಿತ್ತು. ಎಸ್ಕೆ ಹಳೆಯಂಗಡಿಯವರು(ಎಸ್.ಕೆ.ಸಾಲಿಯಾನ್) ಮುಂಬಯಿ ಯ ಮದರ್ ಇಂಡಿಯಾ ಫ್ರೀ ನೈಟ್ ಹೈಸ್ಕೂಲು ಇದರ ಹಳೆವಿದ್ಯಾರ್ಥಿ.ಖ್ಯಾತ ಲೇಖಕರಾದ ಇವರು ಮೊಗವೀರ ಹಾಗೂ ಅಕ್ಷಯ ಪತ್ರಿಕೆಗಳಲ್ಲಿ ಅನೇಕ ಚಿಂತನಶೀಲ ಲೇಖನಗಳನ್ನು ಬರೆದಿದ್ದಾರೆ.

ವಿವೇಕಾನಂದರ ತತ್ವಾದರ್ಶಗಳಲ್ಲಿ ನಂಬಿಕೆಯಿಟ್ಟ ಇವರು ಅದಕ್ಕನುಗುಣವಾಗಿ ಬದುಕುತ್ತಿದ್ದರು.ಒಬ್ಬ ಒಳ್ಳೆಯ ಸಮಾಜ ಸೇವಕ, ಪರೋಪಕಾರಿ ಹಾಗೂ ತತ್ವಜ್ಞಾನಿಯಾಗಿದ್ದರು.ಅನೇಕ ಕೃತಿ ರಚನೆ ಮಾಡಿದ ಇವರು ಇತರರ ಕೃತಿಗಳನ್ನು ಕೂಡ ಪ್ರಕಾಶಿಸಿದ್ದಾರೆ.

ಇವರು ಗುಜರಾತಿನ ಅಜಾತಶತ್ರು ಕನ್ನಡಿಗ, ಅಲ್ಪಸಂಖ್ಯಾತ ಕನ್ನಡಿಗರನ್ನು,ತುಳುವರನ್ನು ಹೊರರಾಜ್ಯದ ಲ್ಲಿ ಸಂಘಟಿಸುವಲ್ಲಿ  ಇವರ ಪಾತ್ರ ಮಹತ್ತರವಾದದ್ದು. ಇಂದಿಗೆ ಸುಮಾರು 50 ವರ್ಷಗಳ ಹಿಂದೆ, ಗುಜರಾತ್ ನಲ್ಲಿ ಕನ್ನಡಿಗರನ್ನು ಸಂಘಟಿಸಿದ  ಹೆಗ್ಗಳಿಕೆ ಇವರದ್ದು.ಆ ಕಾಲದಲ್ಲಿ ಸಂಘಟನೆ ಮಾಡುವುದು ಅಷ್ಟು ಸುಲಭದ ಮಾತಾಗಿರಲಿಲ್ಲ.ಎಸ್ಕೆ ಹಳೆಯಂಗಡಿ ಅವರಿಗೆ ಇದ್ದ ಮಾಧ್ಯಮ ಕ್ಷೇತ್ರದ ಒಡನಾಟ ಅವರನ್ನು
ಸಂಘಟನೆಯ ಮುಂಚೂಣಿಯಲ್ಲಿರುವಂತೆ ಮಾಡಿತು.

ಮೊದಲಿನಿಂದ ಕೊನೆವರೆಗೂ ಅವರು ಅಪಾರ ಜನಪ್ರಿಯತೆಯನ್ನು,ಗೌರವ ಮಾನ್ಯತೆಗಳನ್ನು ಪಡೆದು ಹೆಸರು ವಾಸಿಯಾದರು.ಇದರಿಂದ ಅವರ ನಿಷ್ಪಕ್ಷಪಾತವಾದ ಮತ್ತು ಜಾತ್ಯತೀತ ಮನೋಧರ್ಮವನ್ನು ತಿಳಿಯಲು ಸಾಧ್ಯವಾಗುತ್ತದೆ.

ಸುಮಾರು 6 ದಶಕಗಳ ಕಾಲದಷ್ಷು ಗುಜರಾತ್ ನಲ್ಲಿ ಜೀವನ ನಡೆಸಿದ ಇವರು ಅನೇಕ ಪತ್ರಿಕೆಗಳಿಗೆ ಸುದ್ದಿ, ಲೇಖನಗಳನ್ನು ಬರೆದಿದ್ದಾರೆ.ಅವುಗಳನ್ನು ಒಟ್ಟು ಸೇರಿಸಿದರೆ ಅವೇ ಸುಮಾರು 10000 ಪುಟಗಳಷ್ಟಾಗ ಬಹುದು.ಎಸ್ಕೆಯವರು ಪತ್ರಿಕೆಗಳಿಗೆ ಬರೆದರೂ ಸಂಭಾವನೆ ಅಪೇಕ್ಷಿಸಿದವರಲ್ಲ. ಪತ್ರಿಕೆಯ ಬೆಳವಣಿಗೆಗೆ ಇದೊಂದು ತಮ್ಮ ಅಳಿಲ ಸೇವೆ ಎಂದು ಅವರು ಹೇಳುತ್ತಿದ್ದರು.

ಕರ್ನಾಟಕದಿಂದ ಗುಜರಾತ್ ಗೆ ಬರುವ ಕನ್ನಡ, ತುಳು ಸಾಹಿತಿ, ಪತ್ರಕರ್ತರಿಗೆ ಅವರ ಮನೆ ಸಹೋದರನ ಮನೆಯಂತೆಯೇ ಸಕಲ ಆದರ, ಆತಿಥ್ಯ ಗಳನ್ನು ನೀಡುತ್ತಿತ್ತು.ಡಾ.ಎಸ್.ಎಲ್.ಭೈರಪ್ಪನಂತಹವರು ಸಹ ಇವರ ಆತಿಥ್ಯ ಪಡೆದಿದ್ದರು.

Comments are closed.