ಕರಾವಳಿ

ಆತ್ಮ ನಿರ್ಭರತೆಯಿಂದ ಆರ್ಥಿಕ ಅಭಿವೃದ್ಧಿಗಾಗಿ ಶ್ರಮಿಸಿರಿ: ಫ್ಯಾಶನ್ ಮತ್ತು ಡ್ರೆಸ್ ಡಿಸೈನಿಂಗ್ ಕಾರ್ಯಕ್ರಮದಲ್ಲಿ ಶಾಸಕ ಕಾಮತ್

Pinterest LinkedIn Tumblr

ಮಂಗಳೂರು ಸೆಪ್ಟೆಂಬರ್ 08: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಮಂಗಳೂರು ಮತ್ತು ಪರಿಶಿಷ್ಟ ಜಾತಿ, ವರ್ಗ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ “30 ದಿನಗಳ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಫ್ಯಾಶನ್ ಮತ್ತು ಡ್ರೆಸ್ ಡಿಸೈನಿಂಗ್” ನ ಉದ್ಘಾಟನಾ ಸಮಾರಂಭ ಸೋಮವಾರ ನಗರದ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡ ಸೇವಾ ಕೇಂದ್ರದಲ್ಲಿ ನೆರವೇರಿತು.

ಶಾಸಕ ಡಿ. ವೇದವ್ಯಾಸ್ ಕಾಮತ್ ಮಾತನಾಡಿ, ಆತ್ಮ ನಿರ್ಭರತೆಯಿಂದ ಕಾರ್ಯನಿರ್ವಹಿಸಿ ತಮ್ಮ ಆರ್ಥಿಕ ಅಭಿವೃದ್ಧಿಗಾಗಿ ಹಾಗೂ ಸ್ವಾವಲಂಬನೆಗೆ ಶ್ರಮಿಸಿ ಸರಕಾರದಿಂದ ಸೂಕ್ಷ್ಮ, ಸಣ್ಣ ಹಾಗೂ ಜೀವನೋಪಾಯ ಉದ್ದಿಮೆಗಳಿಗೆ ದೊರೆಯುವ ಧನಸಹಾಯ ಸದುಪಯೋಗವನ್ನು ತಮ್ಮದಾಗಿಸಿಕೊಳ್ಳಬೇಕೆಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಮ್ಮಲ್ಲಿರುವ ಕೌಶಲ್ಯವನ್ನು ಹೊರಹೊಮ್ಮಿಸಿ ತಮ್ಮ ವೈಯಕ್ತಿಕ ಮತ್ತು ದೇಶದ ಆರ್ಥಿಕ ಅಭಿವೃದ್ಧಿ ಚಟುವಟಿಕೆಗಳನ್ನು ಸಕ್ರಿಯಗೊಳಿಸಲು ಇಂತಹ ಉಚಿತ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿ ಆದರ್ಶ ಉದ್ಯಮಿಗಳಾಗಿ ಬೆಳೆದು ಬರಬೇಕೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಇಲಾಖೆಯ ಜಂಟಿ ನಿರ್ದೇಶಕ ಅರವಿಂದ ಡಿ ಬಾಳೇರಿ ಸರಕಾರದ ವಿವಿಧ ಸ್ವ ಉದ್ಯೋಗ ಯೋಜನೆಗಳನ್ನು ವಿವರಿಸಿದರು. ಟ್ರಸ್ಟ್‍ನ ಅಧ್ಯಕ್ಷ ಮೋಹನಾಂಗಯ್ಯ ಶುಭ ಹಾರೈಸಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿ ಸೋಜ ಹಾಗೂ ವಲಯಾಧಿಕಾರಿ ರಾಘವೇಂದ್ರ ಎಂ. ಅತಿಥಿಗಳಾಗಿ ಭಾಗವಹಿಸಿದರು.

ಸಿಡಾಕ್‍ನ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಸ್ವಾಗತಿಸಿ ನಿರೂಪಿಸಿದರು. ಸಿಡಾಕ್‍ನ ಸಲಹೆಗಾರರಾದ ಕುಮಾರಿ ಪ್ರವಿಷ್ಯ ಮತ್ತು ವಿದ್ಯಾ ಉಪಸ್ಥಿತರಿದ್ದರು.

Comments are closed.