ಕರಾವಳಿ

ಕೇಂದ್ರ, ರಾಜ್ಯದ ಅನುದಾನದಿಂದ ಬೈಂದೂರು ಕ್ಷೇತ್ರದ ಸಮಗ್ರ ಅಭಿವೃದ್ದಿ: ಸಂಸದ ಬಿ.ವೈ ರಾಘವೇಂದ್ರ

Pinterest LinkedIn Tumblr

ಕುಂದಾಪುರ: ಶಿವಮೊಗ್ಗ ಲೋಕಸಭಾ ಕ್ಷೇತ್ರವ್ಯಾಪ್ತಿಯ ಬೈಂದೂರು ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮೀನುಗಾರಿಕಾ ಬಂದರುಗಳ ಅಭಿವೃದ್ದಿ ಕಾರ್ಯಗಳು ನಡೆಯುತ್ತಿವೆ. ರಾಜ್ಯದ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಈ ಹಿಂದೆ ಕ್ಷೇತ್ರದ ಸಂಸದರಾಗಿದ್ದವರು. ಕ್ಷೇತ್ರದ ಬಗ್ಗೆ ಅವರಿಗೆ ಅರಿವಿದೆ. ಕೇಂದ್ರ ಹಾಗೂ ರಾಜ್ಯದ ಅನುದಾನದಿಂದ ಬೈಂದೂರು ಕ್ಷೇತ್ರದ ಅಭಿವೃದ್ದಿ ಹೊಂದುತ್ತಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

ಬೈಂದೂರು ಮೆಸ್ಕಾಂ ಸಬ್‍ಸ್ಟೇಷನ್ ಉದ್ಘಾಟನೆ, ಎಸ್.ಟಿ ಪೋಸ್ಟ್ ಮೆಟ್ರಿಕ್ ಬಾಲಕರ ವಿದ್ಯಾರ್ಥಿ ನಿಲಯ ಶಿಲಾನ್ಯಾಸ, ಬೈಂದೂರು ಪಟ್ಟಣ ಪಂಚಾಯತ್ ಉದ್ಘಾಟನೆ ನೆರವೇರಿಸಿ, ಬೈಂದೂರು ಜೆ.ಎನ್.ಆರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಮಫಲಕ ಅನಾವರಣಗೊಳಿಸಿ ಅವರು ಮಾತನಾಡಿದರು.

 

ಅಗ್ನಿಶಾಮಕ ಠಾಣೆಯನ್ನು ಗ್ರಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ್ ಬೊಮ್ಮಾಯಿ ವರ್ಚುವಲ್ ಉದ್ಘಾಟನೆ ನೆರವೇರಿಸಿ, ರಾಜ್ಯದಲ್ಲಿ 10 ಅಗ್ನಿಶಾಮಕ ಠಾಣೆ ಮಂಜೂರಾತಿ ಮಾಡಿದ್ದು, 25 ಕೋಟಿ ಅನುದಾನ ನೀಡಲಾಗಿದೆ. ಇಲಾಖೆಯನ್ನು ಅತ್ಯಾಧುನಿಕ ವ್ಯವಸ್ಥೆಗೆ ಪರಿವರ್ತಿಸಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಶಿವಮೊಗ್ಗ ಕ್ಷೇತ್ರಕ್ಕೆ 550 ಕೋಟಿ ಅನುದಾನ ಬಂದಿದೆ. ಖಾಲಿ ನಿವೇಶನಗಳನ್ನು ಗುರುತಿಸಿ, ನಿವೇಶನ ರಹಿತರಿಗೆ ನೀಡುವ ಕೆಲಸ ಮಾಡಬೇಕಾಗಿದೆ.

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ನದಿ ಹರಿಯುತ್ತಿದ್ದರೂ ಇಲ್ಲಿನ ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಕ್ಷೇತ್ರದ ಪ್ರತಿ ಮನೆಗೂ ಶುದ್ಧ ಕುಡಿಯುವ ನಿರು ಪೂರೈಸುವುದು ನಮ್ಮ ಮೊದಲ ಆದ್ಯತೆಯಾಗಿದ್ದು, ಈ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರದಿಂದ 200 ಕೋಟಿ ರೂ. ಅನುದಾನ ಮಂಜೂರಾಗಿದೆ, ಮುಂದಿನ ಎರಡು ವರ್ಷದೊಳಗೆ ಎಲ್ಲಾ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸಲು ಯೋಜನೆ ರೂಪಿಸಲಾಗಿದೆ ಎಂದರು.ಹಿಂದುಳಿದ ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗಾಗಿ ಸುಮಾರು 100 ಎಕ್ರೆ ಜಾಗ ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದ ಅವರು ಆಧುನಿಕ ಚಿತಾಗಾರ ನಿರ್ಮಾಣಕ್ಕೂ ಅಗತ್ಯ ಕ್ರಮ ಹಾಗೂ ನವ್ಯದ ಹರಿಕಾರ ಕವಿ ಗೋಪಾಲಕೃಷ್ಣ ಅಡಿಗರ ಹೆಸರಿನಲ್ಲಿ ಸುಮಾರು 4.5 ಕೋಟಿ ರೂ. ವೆಚ್ಚದಲ್ಲಿ ಇನ್‍ಡೋರ್ ಆಡಿಟೋರಿಯಂ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ ಎಂದರು.

ಸಂಸದ ಬಿ.ವೈ. ರಾಘವೇಂದ್ರ ಕೇಂದ್ರ ಸಚಿವರಾಗಬೇಕು: ಶಾಸಕ ಬಿ.ಎಂ.ಎಸ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮಾತನಾಡಿ, ಅತೀ ಹಿಂದುಳಿದ ಬೈಂದೂರು ಕ್ಷೇತ್ರ ಅಭಿವೃದ್ದಿಯ ಪಥಕ್ಕೆ ಏರುತ್ತಿದೆ. ಇದಕ್ಕೆ ಕಾರಣಿಭೂತರು ಸಂಸದ ಬಿ.ವೈ ರಾಘವೇಂದ್ರ ಅವರು. ಈಗಾಗಲೇ ಬೈಂದೂರು ಕ್ಷೇತ್ರಕ್ಕೆ 1350 ಕೋಟಿ ಅನುದಾನ ಬಂದಿದೆ. ಇನ್ನೂ ಎರಡು ವರ್ಷದಲ್ಲಿ ಇಡೀ ಕ್ಷೇತ್ರದ ಎಲ್ಲ ಮನೆಗಳಿಗೂ ಕುಡಿಯುವ ನೀರು ಕೊಡುವ ಕೆಲಸ ಆಗುತ್ತದೆ. ಯಾವುದೇ ಪಟ್ಟಣ ಪಂಚಾಯತಿ, ಪುರಸಭೆ ಇಲ್ಲದ ಬೈಂದೂರು ಕ್ಷೇತ್ರ ಈಗ ಪಟ್ಟಣ ಪಂಚಾಯತಿ ಉದ್ಘಾಟನೆ ಆಗುತ್ತಿದೆ. ಇದು ಅಭಿವೃದ್ದಿಗೆ ಪೂರಕವಾಗುತ್ತದೆ. ಹೀಗೆ ಬೈಂದೂರು ಹಿಂದುಳಿದ ಕ್ಷೇತ್ರ ಎನ್ನುವ ಹಣೆಪಟ್ಟಿ ಕಳಚಿ ಅಭಿವೃದ್ದಿ ಹೊಂದಿದ ಕ್ಷೇತ್ರವಾಗಿ ಮಾರ್ಪಡುತ್ತದೆ ಎಂದು ಹೇಳಿದರು.
ಸಂಸದ ಬಿ.ವೈ ರಾಘವೇಂದ್ರ ಅವರು ಕೇಂದ್ರ ಸಚಿವರಾಗಬೇಕು. ಅವರು ಸಚಿವರಾದರೆ ಬೈಂದೂರು ಕ್ಷೇತ್ರಕ್ಕೆ ಇನ್ನಷ್ಟು ಅನುದಾನಗಳು ಸಿಗುತ್ತದೆ ಎಂದರು.
ಜಿಲ್ಲಾಕಾರಿ ಜಿ. ಜಗದೀಶ ಮಾತನಾಡಿ, ನೂತನ ಬೈಂದೂರು ಕಡತಗಳ ವಿಲೇವಾರಿಯಲ್ಲಿ ರಾಜ್ಯದಲ್ಲಿಯೇ ಮೂರನೇ ಸ್ಥಾನದಲ್ಲಿದೆ. ತಾಲೂಕಿನಲ್ಲಿ ಎಲ್ಲಾ ಕಚೇರಿ ತೆರೆಯಲು ಈಗಾಗಲೇ ಜಾಗ ಗುರುತಿಸುವ ಕಾರ್ಯ ನಡೆದಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋತ್, ಉಪ ವಿಭಾಗಾಧಿಕಾರಿ ಕೆ.ರಾಜು, ಜಿ.ಪಂ.ಸದಸ್ಯರಾದ ಬಾಬು ಹೆಗ್ಡೆ, ಸುರೇಶ ಬಟವಾಡಿ, ಶಂಕರ ಪೂಜಾರಿ, ಶೋಭಾ ಜಿ.ಪುತ್ರನ್, ಬೈಂದೂರು ತಾ.ಪಂ. ಅಧ್ಯಕ್ಷ ಮಹೇಂದ್ರ ಪೂಜಾರಿ, ಕುಂದಾಪುರ ತಾ.ಪಂ. ಅಧ್ಯಕ್ಷೆ ಇಂದಿರಾ ಶೆಟ್ಟಿ, ಬೈಂದೂರು ತಾ.ಪಂ.ಉಪಾಧ್ಯಕ್ಷೆ ಮಾಲಿನಿ ಕೆ., ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ರಾಜಪ್ಪ, ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ರವಿ, ಮೆಸ್ಕಾಂ ಇಂಜಿನಿಯರಿಂಗ್ ಕಾರ್ಯನಿರ್ವಾಹಕ ರಾಜೇಶ, ನಗರಾಭಿವೃದ್ದಿ ಯೋಜನಾಧಿಕಾರಿ ಅರುಣ್ ಪ್ರಭಾ, ಅಗ್ನಿಶಾಮಕ ಮಂಗಳೂರು ವಲಯ ಅಧಿಕಾರಿ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

ತಹಶೀಲ್ದಾರ್ ಬಿ.ಪಿ ಪೂಜಾರ್ ಸ್ವಾಗತಿಸಿದರು. ಸುಬ್ರಹ್ಮಣ್ಯ ಜಿ.ಕಾರ್ಯಕ್ರಮ ನಿರ್ವಹಿಸಿ, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿನಾಯಕ ಕಾಮತ್ ವಂದಿಸಿದರು.

Comments are closed.