ಮಂಗಳೂರು ಸೆಪ್ಟೆಂಬರ್ 19: ಪ್ರಪ್ರಥಮ ಬಾರಿಗೆ ಹೆಣ್ಣು ಚಿರತೆಯೊಂದಕ್ಕೆ ಶಸ್ತ್ರ ಚಿಕಿತ್ಸೆ ನಡೆಸಿ ಮರಿಗಳನ್ನು ಹೊರತೆಗೆದ ಅಪರೂಪದ ಘಟನೆಯೊಂದು ಮಂಗಳೂರಿನ ಹೊರವಲಯದ ಮೂಡುಶೆಡ್ಡೆಯಲ್ಲಿರುವ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ನಡೆದಿದೆ.
ಎಂಟು ವರ್ಷ ಪ್ರಾಯದ ಹೆಣ್ಣು ಚಿರತೆ ಚಿಂಟುವಿಗೆ ಪ್ರಸವ ಸಮಸ್ಯೆಯಿಂದ ಸ್ಥಿತಿ ಗಂಭೀರವಾದ ಕಾರಣ ತುರ್ತಾಗಿ ಶಸ್ತ್ರ ಚಿಕಿತ್ಸೆ ನಡೆಸಿ ಗರ್ಭದಲ್ಲಿದ್ದ ಎರಡು ಮರಿಗಳನ್ನು ಹೊರತೆಗೆಯಲಾಗಿದೆ.
ಶಸ್ತ್ರ ಚಿಕಿತ್ಸೆಯ ನಂತರ ಚಿರತೆಯು ಚೇತರಿಸುತ್ತಿದ್ದು, ಮೃಗಾಲಯದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಚಿರತೆಯ ಆರೋಗ್ಯದ ಬಗ್ಗೆ ನಿಗಾವಹಿಸುತ್ತಿದ್ದಾರೆ. ಶಸ್ತ್ರ ಚಿಕಿತ್ಸೆಯನ್ನು ಮೃಗಾಲಯದ ವೈದ್ಯಾಧಿಕಾರಿ ಡಾ.ವಿಷ್ಣುದತ್ ಮತ್ತು ಡಾ. ಯಶಸ್ವಿ ನಡೆಸಿರುತ್ತಾರೆ.
ಎಂಟು ವರ್ಷಗಳ ಹಿಂದೆ ತಾಯಿಯಿಂದ ಪರಿತಕ್ತವಾದ ಐದು ದಿನಗಳ ಮರಿಯನ್ನು ಮೂಡಬಿದಿರೆ ಸಮೀಪದಿಂದ ರಕ್ಷಿಸಿ ಪಿಲಿಕುಳ ಮೃಗಾಲಯದಲ್ಲಿ ಚಿಂಟು ಎಂದು ಹೆಸರಿಟ್ಟು ಪೋಷಿಸಿ ಬೆಳೆಸಲಾಗಿದೆ. ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಒಟ್ಟು 10 ಚಿರತೆಗಳಿವೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್.ಜೆ, ಭಂಡಾರಿ ತಿಳಿಸಿದ್ದಾರೆ.
Comments are closed.