ಮಂಗಳೂರು: ಮಂಗಳೂರಿನ ಲೇಡಿಹಿಲ್ ವೃತ್ತದ ಹೆಸರು ಬದಲಾವಣೆ ವಿವಾದ ತಾರಕ್ಕಕ್ಕೇರುವ ಎಲ್ಲಾ ಲಕ್ಷಣಗಳು ಆರಂಭಗೊಂಡಿದೆ. ವಿವಿಧ ಸಂಘಟನೆಗಳಿಂದ ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡ ಬೇಕೆನ್ನುವ ಕೂಗು ಕೇಳಿ ಬಂದಿದೆ.
ಆದರೆ ಇದೇ ವೇಳೆ ಈ ಬಗ್ಗೆ ಪರ ವಿರೋಧ ಕೂಡ ವ್ಯಕ್ತವಾಗಿದ್ದು, ಲೇಡಿಹಿಲ್ ವೃತ್ತದ ಹೆಸರು ಬದಲಾವಣೆ ಮಾಡದಂತೆ ಆಗ್ರಹಿಸಿ ಕಥೊಲಿಕ್ ಸಭಾ ಮಂಗಳೂರು, ಇದರ ಪದಾಧಿಕಾರಿಗಳು ದ.ಕ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ದೀಗ ಕೆಲವೊಂದು ಸಂಘಟನೆಗಳು ನಗರದಲ್ಲಿ ಓಡಾಡುತ್ತಿರುವ ಬಸ್ಸುಗಳ ಮುಂಭಾಗದಲ್ಲಿ ನಾರಾಯಣ ಗುರು ಸರ್ಕಲ್ ಎನ್ನುವ ಫಲಕಗಳನ್ನು ಅಳವಡಿಸಿದ್ದಾರೆ ಇದೇ ವೇಳೆ ಕೆಲವು ಖಾಸಗಿ ಬಸ್ ಮಾಲೀಕರು ಲೇಡಿಹಿಲ್ ಜಂಕ್ಷನ್ ಅನ್ನು ನಾರಾಯಣ ಗುರು ವೃತ್ತಕ್ಕೆ ಮರುನಾಮಕರಣ ಮಾಡುವುದನ್ನು ಬೆಂಬಲಿಸಿ ತಮ್ಮ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ಒಂದೇಡೆ ವಿಶ್ವಹಿಂದೂ ಪರಿಷದ್, ಬಿರುವೆರ್ ಕುಡ್ಲ ಸೇರಿದಂತೆ ಹಲವಾರು ಹಿಂದೂ ಪರ ಸಂಘಟನೆಗಳು ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡುವಂತೆ ಆಗ್ರಹ ಮಾಡಿದೆ.
ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿನ ಜಾತಿಪದ್ಧತಿಯನ್ನು ತೊಡೆದು ಸಾಮರಸ್ಯ ತರಲು ಶ್ರಮಿಸಿದ ಮಹಾ ಸಂತರು ಅವರ ಹೆಸರನ್ನು ಲೇಡಿಹಿಲ್ ವೃತ್ತಕ್ಕೆ ನಾಮಕರಣ ಮಾಡುವ ಮೂಲಕ ಅವರಿಗೆ ಗೌರವಾರ್ಪಣೆ ಸಲ್ಲಿಸಬೇಕು ಎಂದು ವಿಶ್ವಹಿಂದೂ ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಆಗ್ರಹಿಸಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರುಗಳು ಹಿಂದುಸಮಾಜದಲ್ಲಿನ ಮಹಾಪಿಡುಗು ಅಸ್ಪರ್ಶತೆಯ ನಿರ್ಮೂಲನೆಗೆ ಶ್ರಮಿಸಿದರು, ಸಮಾಜದಲ್ಲಿ ಜಾತಿ ಜಾತಿಗಳ ನಡುವಿನ ಅಂತರ ನೀಗಿಸಲು ಸಮಾನತೆ ಸಾಮರಸ್ಯಕ್ಕೆ ಹೋರಾಡಿದ ಮಹಾನ್ ಸಂತರು ಅವರ ಹೆಸರನ್ನು ಲೇಡಿಹಿಲ್ ಸರ್ಕಲ್ ಗೆ ನಾಮಕರಣ ಮಾಡುವ ಮೂಲಕ ಅವರ ಚಿಂತನೆಗಳನ್ನು ಸಮಾಜಕ್ಕೆ ತಿಳಿಸುವಂತಾಗಲಿ, ಶೀಘ್ರವೇ ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಸರಕಾರಕ್ಕೆ ಈ ಮೂಲಕ ಆಗ್ರಹ ಮಾಡುತ್ತಿದ್ದೇವೆ ಎಂದು ವಿಶ್ವಹಿಂದೂ ಪರಿಷದ್ ಜಿಲ್ಲಾಧ್ಯಕ್ಷರಾದ ಗೋಪಾಲ್ ಕುತ್ತಾರ್ ತಿಳಿಸಿದ್ದಾರೆ.
ನಗರದ ಬಿರುವೆರೆ ಕುಡ್ಲ ಸಂಘಟನೆಯು ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡಲು ಆಗ್ರಹಿಸಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮಾತ್ ಅವರಿಗೆ ಮನವಿ ಸಲ್ಲಿಸಿದೆ.
ಲೇಡಿಹಿಲ್ ಜಂಕ್ಷನ್ ಅಥವಾ ವೃತ್ತಕ್ಕೆ ನಾರಾಯಣ ಗುರು ಹೆಸರು : ಆಕ್ಷೇಪ
ಇನ್ನೊಂದೆಡೆ ಲೇಡಿಹಿಲ್ ಜಂಕ್ಷನ್ ಅಥವಾ ವೃತ್ತಕ್ಕೆ ನಾರಾಯಣ ಗುರು ಹೆಸರು ಇಡುವ ವಿಚಾರವಾಗಿ ಕೆಲವು ವಿದ್ಯಾರ್ಥಿಗಳು ಆಕ್ಷೇಪಣೆ ಎತ್ತಿದ್ದಾರೆ. ಇದೇ ವೇಳೆ ಕಥೋಲಿಕ್ ಸಭಾ ಮುಖಂಡರು ನಾರಾಯಣ ಗುರು ಹೆಸರು ಇಡುವ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ದ.ಕ.ಜಿಲ್ಲಾಧಿಕಾರಿ, ಮಂಗಳೂರು ಮೇಯರ್‌ಗೆ ಹಾಗೂ ಮನಪಾ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಪ್ರಸ್ತುತ ಇರುವ ಲೇಡಿಹಿಲ್ ಜಂಕ್ಷನ್/ಲೇಡಿಹಿಲ್ ಸರ್ಕಲ್ ಗೆ ನೂರಾರು ವರ್ಷಗಳ ಇತಿಹಾಸ ಇರುವುದರಿಂದ ಹಾಗೂ ವಿದ್ಯಾಭ್ಯಾಸದ ಮೂಲಕ ಸ್ತ್ರೀಯರ ಸಬಲೀಕರಣದ ಧ್ಯೋತಕವಾಗಿರು (ಸಂಕೇತವಾಗಿರುವ) ವುದರಿಂದ ಹಾಗೂ ಕ್ರೈಸ್ತರ ಧಾರ್ಮಿಕ ಭಾವನೆಗಳಿರುವ ಲೇಡಿಹಿಲ್ ಹೆಸರನ್ನು ಬದಲಾಯಿಸುವುದಕ್ಕೆ ತೀವ್ರ ಆಕ್ಷೇಪಣೆ ಇದೆ.
ಈ ಶಾಲೆಯ ಮುಖಾಂತರ ಸಾವಿರಾರು ಹೆಣ್ಮಕ್ಕಳು ವಿದ್ಯಾಭ್ಯಾಸ ಹೊಂದಿ ಜೀವನದಲ್ಲಿ ಸಾಧನೆಯನ್ನು ಮಾಡಿದ್ದರು. ಸ್ಥಳೀಯ ಜನರು ಹೆಣ್ಮಕ್ಕಳ ಮೇಲಿನ ಅಭಿಮಾನದಿಂದ ಮತ್ತು ಗೌರವ ತೋರಿಸಲು ಸದ್ರಿ ಸ್ಥಳಕ್ಕೆ “ಲೇಡಿಹಿಲ್ ಎಂದು ನೂರಾರು ವರ್ಷಗಳಿಂದ ಕರೆಯುತ್ತಿದ್ದಾರೆ.
ಹೆಣ್ಮಕ್ಕಳ ವಿದ್ಯಾಭ್ಯಾಸದ ಪ್ರತೀಕವಾಗಿ ಹಾಗೂ ಹೆಸರು ವಾಸಿಯಾದ ಈ ಸ್ಥಳದ ಹೆಸರನ್ನು ಬದಲಾಯಿಸುವುದು ಸಮಂಜಸವಲ್ಲ. ಇತಿಹಾಸವನ್ನು ಬದಲಾಯಿಸುವುದು ಸಮಂಜಸವಲ್ಲ ಎಂದು ”ಲೇಡಿಹಿಲ್” ಹೆಸರಿನ ಐತಿಹಾಸಿಕ ಮಹತ್ವ ಮತ್ತು ಹೆಸರಿಗೆ ಇರುವ ಭಾವಾನಾತ್ಮಕ ಸಂಬಂಧಗಳ ಬಗ್ಗೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
Comments are closed.