ಮಂಗಳೂರು, ಸೆಪ್ಟಂಬರ್.24; ಮಂಗಳೂರಿನ ಲೇಡಿಹಿಲ್ ವೃತ್ತದ ಹೆಸರು ಬದಲಾವಣೆ ವಿವಾದ ದಿನದಿಂದ ದಿನಕ್ಕೆ ಹೊಸ ಹೊಸ ರೂಪು ಪಡೆಯುತ್ತಿದ್ದು, ಹೋರಾಟದ ಕಿಚ್ಚು ಸಂಘರ್ಷದ ದಾರಿ ತುಳಿಯುವ ಲಕ್ಷಣಗಳು ಕಂಡು ಬರುತ್ತಿದೆ.
ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡ ಬೇಕೆನ್ನುವ ವಿಚಾರದಲ್ಲಿ ಪರ – ವಿರೋಧ ಹೇಳಿಕೆ ನಡುವೆಯೇ ಹೊಸ ಹೊಸ ಘಟನೆಗಳು ನಡೆಯುತ್ತಿದ್ದು, ಈ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮತಷ್ಟು ತೀವ್ರಗೊಳ್ಳುವಂತೆ ಕಾಣುತ್ತಿದೆ.
ಇದಕ್ಕೆ ಪೂರಕ ಎಂಬಂತೆ ನಗರದಲ್ಲಿ ಈಗಾಗಲೇ ಕೆಲವು ಸಂಘಟನೆಗಳ ಕಾರ್ಯಕರ್ತರು ಬಸ್ಸುಗಳ ಮುಂಭಾಗದಲ್ಲಿ ನಾರಾಯಣ ಗುರು ಸರ್ಕಲ್ ಎನ್ನುವ ಫಲಕಗಳನ್ನು ಅಳವಡಿಸುವ ಮೂಲಕ ಲೇಡಿಹಿಲ್ ವೃತ್ತದ ಹೆಸರು ಬದಲಾವಣೆಗೆ ನೂತನ ಶೈಲಿಯ ಹೋರಾಟಕ್ಕೆ ಮುಂದಾಗಿದ್ದಾರೆ. ಇದಕ್ಕೆ ಕೆಲವು ಖಾಸಗಿ ಬಸ್ ಮಾಲೀಕರು ಸಾಥ್ ನೀಡಿದ್ದಾರೆ ಎನ್ನಲಾಗಿದ್ದು, ಅವರು ಲೇಡಿಹಿಲ್ ಜಂಕ್ಷನ್ ಅನ್ನು ನಾರಾಯಣ ಗುರು ವೃತ್ತಕ್ಕೆ ಮರುನಾಮಕರಣ ಮಾಡುವುದನ್ನು ಬೆಂಬಲಿಸಿ ತಮ್ಮ ಅಭಿಯಾನವನ್ನು ಪ್ರಾರಂಭಿಸಿದ್ದಾರೆ ಎಂದು ಹೇಳಲಾಗಿದೆ.
ಇದೇ ವೇಳೆ ಕೆಲ ಹಿಂದೂ ಪರ ಸಂಘಟನೆಗಳು ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ನೀಡಿದರೆ, ಇನ್ನೊಂದೆಡೆ ಲೇಡಿಹಿಲ್ ಜಂಕ್ಷನ್ ಅಥವಾ ವೃತ್ತಕ್ಕೆ ನಾರಾಯಣ ಗುರು ಹೆಸರು ಇಡುವ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿ ಕಥೋಲಿಕ್ ಸಭಾ ಮುಖಂಡರು ದ.ಕ.ಜಿಲ್ಲಾಧಿಕಾರಿ, ಮಂಗಳೂರು ಮೇಯರ್‌ಗೆ ಹಾಗೂ ಮನಪಾ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಕೆಲ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಲೇಡಿಹಿಲ್ ವೃತ್ತದಲ್ಲಿ ದಿಢೀರ್ ಎಂದು ಜಮಾಯಿಸಿ, ವೃತ್ತದ ಮಧ್ಯೆ “ಶ್ರೀ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ” ಎಂಬ ಫಲಕ ಅಳವಡಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.
ಆದರೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರ್ಯಕರ್ತರನ್ನು ಸ್ಥಳದಿಂದ ಚದುರಿಸಿ ಪರಿಸ್ಥಿತಿ ಕೈ ಮೀರಿ ಹೋಗದಂತೆ ಮುಂಜಾಗ್ರತೆ ವಹಿಸಿದರು. ಮಾತ್ರವಲ್ಲದೇ ವೃತ್ತದ ಮಧ್ಯೆ ಅಳವಡಿಸಲಾದ ನಾಮ ಫಲಕ ಹಾಗೂ ಬ್ಯಾನರ್ ಗಳನ್ನು ಅಲ್ಲಿಂದ ತೆರವುಗೊಳಿಸಿದರು.
ವಿವಾದದ ಕೇಂದ್ರ ಬಿಂದುವಾಗಿರುವ ಮಂಗಳೂರಿನ ಲೇಡಿಹಿಲ್ ವೃತ್ತದ ಹೆಸರು ಬದಲಾವಣೆ ವಿವಾದದ ಬಗ್ಗೆ ಜಿಲ್ಲಾಡಳಿತ ಹಾಗೂ ಸರ್ಕಾರ ಎಚ್ಚೆತ್ತುಕೊಂಡು ಒಂದು ತೀರ್ಮಾನಕ್ಕೆ ಬರದಿದ್ದರೆ ಮುಂದಿನ ದಿನಗಳಲ್ಲಿ ಈ ವಿವಾದ ಮತ್ತಷ್ಟು ತೀವ್ರಗೊಳ್ಳುವ ಸಂಭವವಿದೆ ಎನ್ನುತ್ತಾರೆ ಸ್ಥಳೀಯರು.
Comments are closed.