ಕರಾವಳಿ

ಮಂಗಳೂರಿನ ಆಸ್ಪತ್ರೆ ವೈದ್ಯರಿಂದ ಅಪರೂಪದ ಹೃದಯ ಶಸ್ತ್ರಚಿಕಿತ್ಸೆ: ಒಂದೂವರೆ ವರ್ಷದ ಮಗುವಿಗೆ ಮರುಜೀವ

Pinterest LinkedIn Tumblr

ಮಂಗಳೂರು, ಸೆಪ್ಟೆಂಬರ್ 25: ಹುಟ್ಟಿನಿಂದಲೇ ಹೃದಯ ಮತ್ತು ಶ್ವಾಸಕೋಶ ಸಂಬಂಧಿ ಸಮಸ್ಯೆ ಹೊಂದಿದ್ದ ಒಂದು ವರ್ಷ ಆರು ತಿಂಗಳ ಹೆಣ್ಣು ಮಗುವೊಂದಕ್ಕೆ ಮಂಗಳೂರಿನ ಖ್ಯಾತ ಆಸ್ಪತ್ರೆಯೊಂದರ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ಮರುಜೀವ ನೀಡಿದ್ದಾರೆ.

ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಮಗು ತನ್ನ ವಯಸ್ಸಿನ ಇತರ ಮಕ್ಕಳಂತೆ ಆಟವಾಡು ವಂತಿರಲಿಲ್ಲ. ಹುಟ್ಟಿನಿಂದಲೇ ಶ್ವಾಸಕೋಶದ ರಕ್ತನಾಳಗಳ ಅವ್ಯವಸ್ಥೆಯಿಂದ ಮಗು ಬಳಲುತ್ತಿತ್ತು.

ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್‌ನಲ್ಲಿ ಟಿಎಪಿವಿಸಿ ರಿಪೇರಿಗೆ ಒಳಗಾಗಿದೆ. ಮಗು ಆಸ್ಪತ್ರೆಗೆ ಆಗಮಿಸಿದಾಗ ತೀವ್ರ ಉಸಿರಾಟ ತೊಂದರೆ ಮತ್ತು ವಯೋಸಹಜ ಬೆಳವಣಿಗೆ ಹೊಂದಿರದ ಸಮಸ್ಯೆ ಹೊಂದಿತ್ತು. ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ, ಮಗು ಕೇವಲ 5 ಕೆ.ಜಿ. ತೂಕವಿತ್ತು. ಇದು ಸಾಧಾರಣವಾಗಿ ಎರಡು ತಿಂಗಳ ಮಗುವಿನ ತೂಕಕ್ಕೆ ಸಮಾನವಾಗಿದೆ.

ಟೋಟಲ್ ಅನೋಮಲಸ್ ಪಲ್ಮನರಿ ವೀನಸ್ ಕನೆಕ್ಷನ್ (ಟಿಎಪಿವಿಸಿ) ಸಮಸ್ಯೆಯಿಂದ ಮಗು ಬಳಲುತಿತ್ತು. ಅಂದರೆ, ಶ್ವಾಸಕೋಶದ ರಕ್ತನಾಳಗಳು ಹೃದಯವನ್ನು ಸಂಪರ್ಕಿಸುವ ರಕ್ತನಾಳಗಳೊಂದಿಗೆ ಅಸ್ಥವ್ಯಸ್ಥವಾಗಿ ಜೋಡಿಕೊಂಡಿತ್ತು. ಆ ಸಮಸ್ಯೆಯಿಂದಾಗಿ ದೇಹದ ಎಲ್ಲೆಡೆ ಆಮ್ಲಜನಕ ಸಹಿತವಾದ ಆರೋಗ್ಯಪೂರ್ಣ ರಕ್ತ ದೇಹದಲ್ಲಿ ಹರಿದಾಡುತ್ತಿರಲಿಲ್ಲ. ಇದರಿಂದಾಗಿ ತೀವ್ರವಾದ ಉಸಿರಾಟ ತೊಂದರೆ, ದೇಹದ ರಕ್ತ ನೀಲಿ ಬಣ್ಣಕ್ಕೆ ತಿರುಗುವುದು ಮತ್ತು ಮಗುವಿನ ಬೆಳವಣಿಗೆಯಲ್ಲಿ ಕುಂಠಿತ ಆಗುತಿತ್ತು.

ಹಲವು ವೈದ್ಯರನ್ನು ಸಂಪರ್ಕಿಸುವಲ್ಲಿನ ವಿಳಂಬದಿಂದಾಗಿ ಮಗುವಿನ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಅಂತಿಮವಾಗಿ ಇಂಡಿಯಾನಾ ಆಸ್ಪತ್ರೆಗೆ ದಾಖಲಿಸಿದಾಗ ಆಕೆಯ ಸಮಸ್ಯೆಯನ್ನು ಅವಲೋಕಿಸಿದ ತಜ್ಞರು ಕುಟುಂಬದ ಒಪ್ಪಿಗೆಯ ನಂತರ ಆಕೆಯನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲು ನಿರ್ಧರಿಸಿ, 2020ರ ಜುಲೈ ಕೊನೆಯ ವಾರದಲ್ಲಿ ಶಸ್ತಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು.

ತೆರೆದ ಹೃದಯ ಶಸ್ತ್ರಚಿಕಿತ್ಸೆ ವಿಧಾನದಲ್ಲಿ ಅವ್ಯವಸ್ಥಿತ ನಾಳಗಳ ಸಂಪರ್ಕವನ್ನು ಸರಿ ಪಡಿಸಲಾಯಿತು. ಆಸ್ಪತ್ರೆಯ ಮುಖ್ಯಸ್ಥರ ಪ್ರಕಾರ, ದಕ್ಷಿಣ ಕನ್ನಡ ಮತ್ತು ನೆರೆಯ ಜಿಲ್ಲೆಯಲ್ಲಿ ಮಕ್ಕಳಿಗೆ ಮಾಡಲಾದ ಅತ್ಯಂತ ಅಪರೂಪದ ತೆರೆದ ಹೃದಯ ಶಸ್ತ್ರಚಿಕಿತ್ಸೆಗಳಲ್ಲಿ ಇದು ಒಂದು.

ಶಸ್ತ್ರಚಿಕಿತ್ಸೆ ಪ್ರಕ್ರಿಯೆ ಪೂರ್ಣಗೊಳ್ಳಲು ಸುಮಾರು ಮೂರು ಗಂಟೆಗಳ ಸಮಯ ತೆಗೆದುಕೊಂಡಿತು ಮತ್ತು ಒಂದು ವಾರದ ನಂತರ ಮಗುವು ಸಂಪೂರ್ಣವಾಗಿ ಗುಣಮುಖವಾದ ಅನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಇಂಡಿಯಾನಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಹೃದ್ರೋಗ ತಜ್ಞರು ಡಾ. ಯೂಸುಫ್ ಕುಂಬ್ಳೆ, ಮಕ್ಕಳ ಚಿಕಿತ್ಸೆ ವಿಭಾಗದ ಮುಖ್ಯಸ್ಥರು ಡಾ. ಅಲಿ ಕುಂಬ್ಳೆ, ನವಜಾತ ಶಿಶು ತಜ್ಞ ಡಾ. ಅಭಿಷೇಕ್, ಹೃದಯ ಶಸ್ತ್ರಚಿಕಿತ್ಸಕ ಡಾ. ಸಿದ್ಧಾರ್ಥ್ ವಿ. ಟಿ, ಹೃದಯ ಅರಿವಳಿಕೆ ತಜ್ಞ ಡಾ. ಮದನ್, ಮಕ್ಕಳ ಇಂಟೆನ್ಸಿವ್ ಕೇರ್ ತಜ್ಞ ಡಾ. ಅರುಣ್ ವರ್ಗೀಸ್ ಅವರು ತಂಡದಲ್ಲಿದ್ದರು.

ಮಗುವಿನ ಕುಟುಂಬವು ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿದ್ದು, ಬಿಪಿಎಲ್ ಕಾರ್ಡ್ ಸಹ ಹೊಂದಿರಲಿಲ್ಲ. ಆದ್ದರಿಂದ ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಯುಸುಫ್ ಕುಂಬ್ಳೆ ಅವರು ಬಡ ಮತ್ತು ನಿರ್ಗತಿಕ ಜನರಿಗೆ ಸಹಾಯ ಮಾಡಲು ಸ್ಥಾಪಿಸಿದ ಟ್ರಸ್ಟ್ ಇಂಡಿಯಾನಾ ಫಾತಿಮಾ ಹೆಲ್ತ್ ಫೌಂಡೇಶನ್ ವತಿಯಿಂದ 1.5 ಲಕ್ಷ ರೂ. ನೀಡುವ ಮೂಲಕ ಮಗುವಿಗೆ ಚಿಕಿತ್ಸೆಯ ವೆಚ್ಚವನ್ನು ಪೂರೈಸಲು ಸಹಾಯ ಮಾಡಿದರು.

Comments are closed.