ಕರಾವಳಿ

ಹರಿದಾಸರು ಜೀವನಮೌಲ್ಯವನ್ನು ಹಾಡಿ ಬದುಕಿ ತೋರಿಸಿಕೊಟ್ಟರು : ಸಂಗೀತ ವಿದ್ಯಾ ನಿಧಿ ಡಾ. ವಿದ್ಯಾಭೂಷಣ

Pinterest LinkedIn Tumblr

ಮಂಗಳೂರು : ‘ಭಕ್ತಿಯ ಮೂಲಕ ಭಗವಂತನ ಆರಾಧನೆಯೇ ನಮ್ಮ ಜೀವನದ ಪರಮಮೌಲ್ಯ. ಅದಕ್ಕೆ ಪೋಷಕವಾಗಿ ಸದ್ಗುಣಗಳಿಂದ ದೇಹವನ್ನು ಮನವನ್ನು ಶೋಧಿಸಿ ಶುಚಿಯಾಗಿಟ್ಟು ಕೊಳ್ಳುವುದೇ ಜೀವನಮೌಲ್ಯ ಎಂದು ಹರಿದಾಸರು ತಮ್ಮ ಕೀರ್ತನೆಗಳ ಮೂಲಕ ಹಾಡಿದ್ದಾರೆ. ಮಾತ್ರವಲ್ಲ ಅಂತೆಯೇ ಬಾಳಿ ಬದುಕಿ ತೋರಿಸಿಕೊಟ್ಟಿದ್ದಾರೆ’ – ಎಂದು ಸಂಗೀತ ವಿದ್ಯಾನಿಧಿ ಡಾ. ವಿದ್ಯಾಭೂಷಣರು ಹೇಳಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಮಂಗಳೂರು, ಏರ್ಪಡಿಸಿದ ‘ದಾಸಸಾಹಿತ್ಯದಲ್ಲಿ ಜೀವನ ಮೌಲ್ಯಗಳು’  ಎಂಬ ಸಂಗೋಷ್ಠಿಯಲ್ಲಿ ಮುಖ್ಯ ಉಪನ್ಯಾಸಕರಾಗಿ ಅವರು ಮಾತನಾಡುತ್ತಿದ್ದರು.

‘ನಮ್ಮ ಜೀವನ ಆಧ್ಯಾತ್ಮಿಕ ಉನ್ನತಿಗೆ ಪೂರಕವಾಗಿರಬೇಕು. ಎಲ್ಲ ಅಹಂಕಾರ ಮಮಕಾರಗಳನ್ನು ತ್ಯಾಗಮಾಡಿ ಸಕಲವೂ ಭಗವಂತನಿಗೆ ಸೇರಿದ್ದೆಂದು ಭಾವಿಸಿ ಜೀವಿಸಬೇಕು. ಸತ್ಯ, ದಯೆ, ಅಹಿಂಸೆ, ಇಂದ್ರಿಯನಿಗ್ರಹ, ಜ್ಞಾನ, ತಪಸ್ಸು, ಕ್ರಿಯೆ ಹಾಗೂ ಧ್ಯಾನ ಎಂಬ ಎಂಟು ಸದ್ಗುಣಪುಷ್ಪಗಳಿಂದ ಭಗವಂತನನ್ನು ಒಲಿಸಿಕೊಳ್ಳಬೇಕು ಎಂದು ಹರಿದಾಸರು ಪ್ರತಿಪಾದಿಸಿದ್ದಾರೆ. ತ್ರಿಕರಣಪರಿಶುದ್ಧಿಯ ಮೂಲಕ ಭಗವಂತನ ಪ್ರೀತಿಯನ್ನು ಗಳಿಸಿಕೊಳ್ಳುವುದು ಅವರು ನಮಗೆ ತೋರಿಸಿಕೊಟ್ಟ ಜೀವನಮೌಲ್ಯ’ ಎಂಬುದಾಗಿ ಅವರು ಹೇಳಿದರು.

ಮಖ್ಯ ಅತಿಥಿಯಾಗಿ ಭಾಗವಹಿಸಿದ ಶಕ್ತಿ ಶಿಕ್ಷಣಸಂಸ್ಥೆಗಳ ಆಡಳಿತಾಧಿಕಾರಿಗಳಾದ ಡಾ. ಕೆ. ಸಿ. ನಾಯ್ಕ್ ಅವರು, ‘ಹರಿದಾಸರು ಜೀವನದರ್ಶನವನ್ನು ತೋರಿಸಿಕೊಟ್ಟಿರುವುದರ ಜೊತೆಗೆ ಸಮಾಜದ ಓರೆಕೋರೆಗಳನ್ನು ತಿದ್ದುವುದರಲ್ಲಿ ಪ್ರಮುಖ ಪಾತ್ರ ವಹಿಸಿದರು’ ಎಂದರು.

ಜಿಲ್ಲೆಯ ಕೋಶಾಧಿಕಾರಿಯಾದ ಮಾಧವ ಜೊಗಿತ್ತಾಯರು ಉಪಸ್ಥಿತರಿದ್ದರು. ಮಂಜೇಶ್ವರ ಘಟಕದ ಸಂಚಾಲಕರಾದ ದಾಮೊದರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಉಡುಪಿ ಜಿಲ್ಲೆಯ ಕಾರ್ಯದರ್ಶಿ ಡಾ. ಪ್ರಜ್ಞಾ ಮಾರ್ಪಳ್ಳಿ ಸ್ವಾಗತಿಸಿದರು. ಕಾರ್ಕಳ ಘಟಕದ ಸೀಮಾ ಬಾಳಿಗ ಪ್ರಾರ್ಥಿಸಿದರು. ಕೊಡಗು ಜಿಲ್ಲೆಯ ಕಾರ್ಯದರ್ಶಿ ಬಬ್ಬೀರ ಸರಸ್ವತಿ ವಂದಿಸಿದರು.

Comments are closed.