ಕರಾವಳಿ

ಮಂಗಳೂರಿನಲ್ಲಿ ವಿಮಾನದ ಸೀಟಿನಡಿಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನದ ಬಿಸ್ಕತ್ತುಗಳು ಪತ್ತೆ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್. 28: ದುಬೈನಿಂದ ಬಂದಿಳಿದ ವಿಮಾನದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನದ ಬಿಸ್ಕತ್ತುಗಳು ಪತ್ತೆಯಾದ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ.

ರವಿವಾರ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಗುಪ್ತಚರ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ದುಬೈನಿಂದ ಬಂದಿಳಿದ ವಿಮಾನದಿಂದ ಬರೊಬ್ಬರಿ 33.88 ಲಕ್ಷ ರೂ. ಮೌಲ್ಯದ 671 ಗ್ರಾಂ ತೂಕದ 6 ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ದುಬೈ-ಮಂಗಳೂರು- ಹೈದರಾಬಾದ್ ನಡುವಿನ ಇಂಡಿಗೋ ವಿಮಾನದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸಲು ಯತ್ನಿಸಿರುವ ಶಂಕೆಯಿಂದಾಗಿ ಕಸ್ಟಮ್ಸ್ ಗುಪ್ತಚರ ದಳದ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ವಿಮಾನದ ಸೀಟಿನಡಿ ಅಡಗಿಸಿಟ್ಟಿದ್ದ ಚಿನ್ನದ ಬಿಸ್ಕತ್ ಗಳು ಪತ್ತೆ ಹಚ್ಚಿದ್ದಾರೆ.

ಈ ವಿಮಾನ ದುಬೈನಿಂದ ಮಂಗಳೂರು ತನಕ ಅಂತಾರಾಷ್ಟ್ರೀಯ ಯಾನವಾಗಿ ಹಾಗೂ ಮಂಗಳೂರು- ಹೈದರಾಬಾದ್ ನಡುವೆ ದೇಶೀಯ ವಿಮಾನವಾಗಿ ಕಾರ್ಯಾಚರಿಸುತ್ತಿದ್ದು, ಮಂಗಳೂರಿನಿಂದ ಹೈದರಾಬಾದ್‌ಗೆ ಪ್ರಯಾಣಿಸುವ ಪ್ರಯಾಣಿಕ ಈ ಚಿನ್ನವನ್ನು ಸಂಗ್ರಹಿಸಿ ಕೊಂಡೊಯ್ಯುವ ಉದ್ದೇಶ ಹೊಂದಿದ್ದ ಎನ್ನಲಾಗಿದೆ.

ದೇಶೀಯ ಯಾನ ಆಗಿರುವುದರಿಂದ ವಿಮಾನದಲ್ಲಿ ಕಟ್ಟುನಿಟ್ಟಿನ ತಪಾಸಣೆ ಇರಲಾರದು ಎಂದು ಭಾವಿಸಿ ಈ ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಲಾಗಿತ್ತು ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಆರೋಪಿಯ ಬಂಧನಕ್ಕಾಗಿ ಅಧಿಕಾರಿಗಳು ವ್ಯಾಪಕ ಶೋಧ ಕಾರ್ಯಚರಣೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

Comments are closed.