ನವದೆಹಲಿ: ಅಯೋಧ್ಯೆಯಲ್ಲಿದ್ದ ಬಾಬ್ರಿ ಮಸೀದಿ ಕಟ್ಟಡವನ್ನು 1992ರಲ್ಲಿ ಕರಸೇವಕರು ಕೆಡವಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯ ತೀರ್ಪು ನೀಡಲಿದೆ. ಈ ಪ್ರಕರಣದ ಅಂತಿಮ ತೀರ್ಪನ್ನು ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಲಿದೆ. ವಿಶೇಷ ಕೋರ್ಟ್ ನ್ಯಾಯಾಧೀಶ ಎಸ್.ಕೆ. ಯಾದವ್ ನೇತೃತ್ವದ ನ್ಯಾಯಪೀಠವು 28 ವರ್ಷಗಳ ನಂತರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು ಪ್ರಕಟಿಸಲಿದೆ.
ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ 32 ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಾಗಿರುವಂತೆ ನಿರ್ದೇಶಿಸಲಾಗಿದೆ. ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ, ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಶಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ, ಬಜರಂಗ ದಳ ಸಂಸ್ಥಾಪಕ ವಿನಯ್ ಕಟಿಯಾರ್ ಸೇರಿದಂತೆ 32 ಆರೋಪಿಗಳು ಕೋರ್ಟ್ಗೆ ಹಾಜರಾಗಲಿದ್ದಾರೆ.
ಸೆಪ್ಟೆಂಬರ್ 1ರಂದು ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಾದ-ಪ್ರತಿವಾದ ಮುಕ್ತಾಯಗೊಂಡಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಒಟ್ಟು 351 ಜನ ಸಾಕ್ಷಿಗಳು ಹಾಗೂ ಸುಮಾರು 600 ಸಾಕ್ಷ್ಯಚಿತ್ರಗಳ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಇವೆಲ್ಲವೂ 1992ರ ಡಿಸೆಂಬರ್ 6ರಂದು ಕರಸೇವಕರು ಅಯೋಧ್ಯೆಯ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದರು ಎಂಬ ಬಗೆಗಿನ ಸಾಕ್ಷ್ಯಾಧಾರಗಳಾಗಿವೆ.
1992ರಲ್ಲಿ ನಡೆದಿದ್ದೇನು?
ಕರ ಸೇವಕರು ರಾಮಮಂದಿರವಿದ್ದ ಭೂಮಿಯಲ್ಲಿ ಬಾಬ್ರಿ ಮಸೀದಿಯನ್ನು ಕಟ್ಟಲಾಗಿದೆ ಎಂದು ಪ್ರತಿಪಾದಿಸಿ 1992ರ ಡಿಸೆಂಬರ್ 6ರಂದು, ಮಸೀದಿಯನ್ನು ಧ್ವಂಸ ಮಾಡಿದ್ದರು. ಕಳೆದ ವರ್ಷ ತೀರ್ಪು ನೀಡಿದ್ದ ಸುಪ್ರೀಂ ಅಯೋಧ್ಯೆಯಲ್ಲಿನ ಈ ವಿವಾದಾತ್ಮಕ ಭೂಮಿಯನ್ನು ಹಕ್ಕುದಾರಿಕೆಯನ್ನು ರಾಮಲಲ್ಲಾನಿಗೆ ನೀಡಿತು. ಅಯೋಧ್ಯೆಯಲ್ಲೇ ಮಸೀದಿ ನಿರ್ಮಾಣಕ್ಕೆ ಐದು ಎಕರೆ ನಿವೇಶನ ನೀಡಬೇಕು ಎಂದು ಆದೇಶಿಸಿತ್ತು. ಹಾಗೆಯೇ ಬಾಬ್ರಿ ಮಸೀದಿ ಧ್ವಂಸ ಕಾನೂನು ಉಲ್ಲಂಘನೆ ಎಂದು ತಿಳಿಸಿತ್ತು.
Comments are closed.