ಮಂಗಳೂರು : ಶ್ರೀಮಂತ ಚುಟುಕು ಕ್ರಿಕೆಟ್ ಐಪಿಎಲ್ ಆರಂಭದೊಂದಿಗೆ ಹಲವೆಡೆಗಳಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯು ಜೋರಾಗಿಯೇ ಶುರುವಾಗಿದೆ. ಪೊಲೀಸ್ ಇಲಾಖೆಯ ಕಣ್ಣು ತಪ್ಪಿಸಿ ನಡೆಯುತ್ತಿರುವ ಈ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಪೊಲೀಸರು ತಮ್ಮದೇ ಆದ ಶೈಲಿಯಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಈ ರೀತಿಯ ಕಾರ್ಯಾಚರಣೆಯಲ್ಲಿ ಮಂಗಳೂರಿನ ರಥಭೀದಿ ಸಮೀಪ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ 11 ಮಂದಿ ಆರೋಪಿಗಳನ್ನು ಮಂಗಳೂರಿನ ಸಿಸಿಬಿ ಮತ್ತು ಬಂದರು ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿಗಳಿಂದ 11 ಮೊಬೈಲ್, 15 ಸಾವಿರ ರೂ. ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ನಗರದ ಕಾರ್‌ಸ್ಟ್ರೀಟ್ ಮಹಾಮ್ಮಾಯಿ ಕೆರೆ ಸಮೀಪದ ಪ್ಲೈವುಡ್ ಅಂಗಡಿಯೊಂದರಲ್ಲಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಮತ್ತು ಬಂದರು ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ನಗರದ ಸುತ್ತಮುತ್ತಲಿನ ನಿವಾಸಿಗಳಾದ ಜಾನ್ ಕೊಯಲ್ಲೋ, ರಿಚರ್ಡ್ ಲೋಬೋ, ಮೊಹಿದ್ದೀನ್ ಕುನ್ನಿ, ಸುಬ್ರಹ್ಮಣ್ಯ ಶೇಟ್, ಗೌತಮ್ ಮಜಿ, ಶ್ರೀನಿವಾಸ್, ಜಗದೀಶ್, ತಿಮ್ಮಪ್ಪ ಗೌಡ, ಉನ್ನಿಕೃಷ್ಣನ್, ಸುಧಾಕರ್, ಪ್ರತಾಪ್ ಶೆಟ್ಟಿ ಎಂದು ಹೆಸರಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ನಿರ್ದೇಶನದಂತೆ ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥಾ ವಿಭಾಗ ಡಿಸಿಪಿ ಅರುಣಾಂಶುಗಿರಿ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ್ ಗಾಂವ್ಕರ್ ಮಾರ್ಗದರ್ಶನದಂತೆ ಬಂದರು ಠಾಣಾ ಇನ್‌ಸ್ಪೆಕ್ಟರ್ ಗೋವಿಂದರಾಜು, ಎಸ್‌ಐ ಗುರುಕಾಂತಿ ಮತ್ತು ಸಿಬ್ಬಂದಿ, ಸಿಸಿಬಿ ಸಬ್‌ಇನ್‌ಸ್ಪೆಕ್ಟರ್ ಕಬ್ಬಳ್‌ರಾಜ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Comments are closed.