ನವದೆಹಲಿ: ಅಯೋಧ್ಯೆಯಲ್ಲಿದ್ದ ಬಾಬ್ರಿ ಮಸೀದಿ ಕಟ್ಟಡವನ್ನು 1992ರಲ್ಲಿ ಕರಸೇವಕರು ಕೆಡವಿಹಾಕಿದ ಘಟನೆ ಸಂಬಂಧ ಇಂದು ನ್ಯಾಯಾಲಯ ತೀರ್ಪು ನೀಡಿದೆ.
28 ವರ್ಷಗಳ ಈ ಹಳೆಯ ಪ್ರಕರಣದ ಅಂತಿಮ ತೀರ್ಪನ್ನು ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಿದೆ. ಬಾಬರಿ ಮಸೀದಿ ಧ್ವಂಸ ಮಾಡಿದ್ದು ಪೂರ್ವನಿಯೋಜಿತ ಎಂದು ಅನಿಸುವುದಕ್ಕೆ ಪ್ರಬಲ ಸಾಕ್ಷ್ಯಾಧಾರಗಳು ಇಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠವು ಎಲ್ಲಾ 32 ಆರೋಪಿಗಳನ್ನ ಖುಲಾಸೆಗೊಳಿಸಿದೆ.
ಲಕ್ನೋ ವಿಶೇಷ ಸಿಬಿಐ ಕೋರ್ಟ್ ನ್ಯಾಯಾಧೀಶ ಎಸ್.ಕೆ. ಯಾದವ್ ನೇತೃತ್ವದ ನ್ಯಾಯಪೀಠ ಇಂದು 2 ಸಾವಿರ ಪುಟಗಳ ತೀರ್ಪನ್ನು ಪ್ರಕಟಿಸಿದೆ. ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ, ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಶಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ, ಬಜರಂಗ ದಳ ಸಂಸ್ಥಾಪಕ ವಿನಯ್ ಕಟಿಯಾರ್ ಸೇರಿದಂತೆ 32 ಮಂದಿ ಈಗ ಈ ಪ್ರಕರಣದಲ್ಲಿ ದೋಷಮುಕ್ತರಾಗಿದ್ದಾರೆ.
ಆರೋಪಿಗಳು ಖುದ್ದು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಸೂಚಿಸಲಾಗಿತ್ತು. ಅಂತೆಯೇ 32 ಮಂದಿಯಲ್ಲಿ 26 ಮಂದಿ ಕೋರ್ಟ್ಗೆ ಹಾಜರಿದ್ದರು. ವಯಸ್ಸು ಮತ್ತು ಕೋವಿಡ್ ಕಾರಣಕ್ಕೆ ಎಲ್.ಕೆ. ಆಡ್ವಾಣಿ, ಮುರಳಿ ಮನೋಹರ್ ಜೋಷಿ, ಕಲ್ಯಾಣ್ ಸಿಂಗ್, ಉಮಾ ಭಾರತಿ, ನೃತ್ಯಗೋಪಾಲ್ ದಾಸ್ ಸೇರಿದಂತೆ ಆರು ಮಂದಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಕೋರ್ಟ್ ಕಲಾಪದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು.
ಸೆಪ್ಟೆಂಬರ್ 1ರಂದು ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಾದ-ಪ್ರತಿವಾದ ಮುಕ್ತಾಯಗೊಂಡಿತ್ತು. ಪ್ರಕರಣದ ತನಿಖೆ ನಡೆಸಿದ ಸಿಬಿಐ ಒಟ್ಟು 351 ಜನ ಸಾಕ್ಷಿಗಳು ಹಾಗೂ ಸುಮಾರು 600 ಸಾಕ್ಷ್ಯಚಿತ್ರಗಳ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಇವೆಲ್ಲವೂ 1992ರ ಡಿಸೆಂಬರ್ 6ರಂದು ಕರಸೇವಕರು ಅಯೋಧ್ಯೆಯ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದರು ಎಂಬ ಬಗೆಗಿನ ಸಾಕ್ಷ್ಯಾಧಾರಗಳಾಗಿತ್ತು.
ಪ್ರಕರಣದಲ್ಲಿ ಆರೋಪಿಗಳು ದೋಷಿಗಳೆಂದು ಇವತ್ತು ತೀರ್ಪಾಗಿದ್ದರೆ ಎಲ್.ಕೆ. ಆಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾ ಭಾರತಿ, ವಿನಯ್ ಕಟಿಯಾರ್, ಸಾಧ್ವಿ ರಿತಂಬರಾ, ಮಹಂತ ನೃತ್ಯ ಗೋಪಾಲದಾಸ್, ಚಂಪತ್ ರಾಯ್ ಬನ್ಸಾಲ್, ರಾಮ್ ವಿಲಾಸ್ ವೇದಾಂತಿ, ಧರ್ಮದಾಸ್ ಮತ್ತು ಸತೀಶ್ ಪ್ರಧಾನ್ ಅವರಿಗೆ ಗರಿಷ್ಠ 5 ವರ್ಷದವರೆಗೆ ಶಿಕ್ಷೆ ನೀಡುವ ಸಾಧ್ಯತೆ ಇತ್ತು ಎನ್ನಲಾಗಿದೆ.
Comments are closed.