ಕರ್ನಾಟಕ

ವಿವಾದಕ್ಕೆ ತೆರೆ: ಕೊನೆಗೂ ಕಾಂಗ್ರೆಸ್ ಸೇರ್ಪಡೆಗೊಂಡ ದಿವಂಗತ ಡಿ ಕೆ ರವಿ ಅವರ ಪತ್ನಿ ಕುಸುಮಾ

Pinterest LinkedIn Tumblr

ಬೆಂಗಳೂರು, ಅಕ್ಟೋಬರ್. 04 : ಆರ್.ಆರ್ ನಗರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಆಯ್ಕೆ ವಿಚಾರಕ್ಕೆ ಕೊನೆಗೂ ತೆರೆ ಬಿದ್ದಿದೆ. ಹತ್ತು ಹಲವು ವಿವಾದಗಳ ಮಧ್ಯೆ ಜೆಡಿಎಸ್ ಮುಖಂಡ ಹನುಮಂತರಾಯಪ್ಪ ಅವರ ಪುತ್ರಿ, ಐಎಎಸ್​ ಅಧಿಕಾರಿ ದಿವಂಗತ ಡಿ ಕೆ ರವಿ ಅವರ ಪತ್ನಿ ಕುಸುಮಾ ಅವರು ಕೊನೆಗೂ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಇಂದು ಕುಸುಮಾ ಎಚ್. ಅವರು ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ಪಡೆದರು.

ಡಿ.ಕೆ. ಶಿವಕುಮಾರ್ ಅವರು ಕುಸುಮಾ ಅವರಿಗೆ ಕಾಂಗ್ರೆಸ್ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು. ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ, ಕಾರ್ಯಾಧ್ಯಕ್ಷ ಸಲೀಂ ಅಹಮದ್, ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್, ಬೆಂಗಳೂರು ಉತ್ತರ ಜಿಲ್ಲೆ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ್, ಕುಸುಮಾ ಅವರ ತಂದೆ ಹನುಮಂತರಾಯಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತ್ರತ್ವದಲ್ಲಿ ಕಾಂಗ್ರೆಸ್ ನಾಯಕರು ಹನುಮಂತರಾಯಪ್ಪ ಅವರ ನಿವಾಸಕ್ಕೆ ತೆರಳಿ ಹನುಮಂತರಾಯಪ್ಪ ಹಾಗೂ ಪುತ್ರಿ ಕುಸುಮಾ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಚರ್ಚೆಯಲ್ಲಿ ಪಕ್ಷ ಸೇರುವ ಬಗ್ಗೆ ಖುದ್ದು ಕುಸುಮಾ ಅವರ ಅಭಿಪ್ರಾಯವನ್ನ ನಾಯಕರು ಸಂಗ್ರಹಿಸಿದ್ದಾರೆ.

ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ನಾವು ಮೊದಲಿಂದಲೂ ಈ ಕುಟುಂಬದ ಹಿತೈಷಿಗಳು. ಡಿ.ಕೆ. ರವಿ ಅವರ ಪತ್ನಿ ಕುಸುಮಾ ಅವರು ಕಾಂಗ್ರೆಸ್ ಸೇರುವ ಬಗ್ಗೆ ಇಚ್ಚೆ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರ ರಾಮಲಿಂಗಾ ರೆಡ್ಡಿ ನೇತೃತ್ವದ ಸಮಿತಿ ನಿರ್ಧಾರ ಮಾಡಿದ್ದು, ರಾಮಲಿಂಗಾ ರೆಡ್ಡಿ ಅವರ ಸಮಿತಿ ಶಿಫಾರಸ್ಸು ಮಾಡಿರುವ ಹೆಸರುಗಳನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜೊತೆ ಕುಳಿತು ಚರ್ಚೆ ಮಾಡಿದ ನಂತರ ಅಭ್ಯರ್ಥಿಯನ್ನ ಫೈನಲ್ ಮಾಡಿದ್ದೇವೆ ಎಂದು ಹೇಳಿದ್ದರು.

ಸೊಸೆಗೆ ಅತ್ತೆ ಸವಾಲ್:

ಇತ್ತೀಚಿಗೆ ತಾನೇ ಚುನಾವಣೆಯಲ್ಲಿ ನನ್ನ ಮಗನ ಫೋಟೋ-ಹೆಸರು ಬಳಸಿದ್ರೆ ಹುಷಾರ್. ನಿನಗೆ ಸಾಧ್ಯವಾದರೆ ಸ್ವತ: ನಿನ್ನ ಹೆಸರನ್ನು ಬಳಸಿಕೊಂಡು ಚುನಾವಣೆಗೆ ಸ್ಫರ್ಧಿಸಿ ಗೆಲ್ಲು.ಎಂದು ದಿ. ಐಎಎಸ್​ ಅಧಿಕಾರಿ ಡಿ.ಕೆ.ರವಿ ಅವರ ತಾಯಿ ತನ್ನ ಸೊಸೆಗೆ ಸವಾಲ್ ಹಾಕಿದ್ದರು.

ಚುನಾವಣೆಯಲ್ಲಿ ಅವರು ಏನಾದ್ರೂ ಮಾಡಿಕೊಳ್ಳಲಿ. ಆದರೆ ಚುನಾವಣೆಯಲ್ಲಿ ನನ್ನ ಮಗನ ಫೋಟೋ-ಹೆಸರು ಬಳಸಿದ್ರೆ ಜಾಗ್ರತೆ. ಅಪ್ಪಿತಪ್ಪಿ ನನ್ನ ಮಗನ ಫೋಟೋ ಬಳಸಿಕೊಂಡರೆ ಹುಡುಗರನ್ನು ಕರೆದುಕೊಂಡು ನಾನೇ ಹೋಗಿ ಬೆಂಕಿ‌ ಹಚ್ಚಿಸ್ತೀನಿ ಎಂದು ಎಚ್ಚರಿಕೆ ನೀಡಿದ್ದರು.

ದಿವಂಗತ ಡಿ.ಕೆ.ರವಿ ಪತ್ನಿಗೆ ಟಿಕೆಟ್‌ಗೆ ಯತ್ನ -ಸೊಸೆಗೆ ಸವಾಲ್ ಹಾಕಿದ ಅತ್ತೆ

Comments are closed.