ಕರಾವಳಿ

ಅನಾರೋಗ್ಯದಿಂದ ಕುಂದಾಪುರದ ಯುವ ಪತ್ರಕರ್ತ ಹರೀಶ್ ನಿಧನ

Pinterest LinkedIn Tumblr

ಕುಂದಾಪುರ: ಕುಂದಾಪುರದ ಸ್ಥಳೀಯ ಪತ್ರಿಕೆಯೊಂದರಲ್ಲಿ ಪತ್ರಕರ್ತನಾಗಿದ್ದ ಹೊಸಾಡು ಕೆಳ ಕುಂಬ್ರಿ ನಿವಾಸಿ ಹರೀಶ್(27) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಕುಂದಾಪುರದ ಸ್ಥಳೀಯ ಪತ್ರಿಕೆಯಾದ ಚಾಲುಕ್ಯದಲ್ಲಿ ಸುದ್ದಿ ಸಂಗ್ರಹ, ಪ್ರಸರಣ ಹಾಗೂ ಜಾಹಿರಾತು ವಿಭಾಗದಲ್ಲಿ ಕಳೆದ ಹಲವು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ಹರೀಶ್ ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ್ದು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಕೂಡ ಆಗಿದ್ದರು.

ಕಳೆದ ವಾರದ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಎರಡು ದಿನದ ಹಿಂದೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಬಹು ಅಂಗಾಂಗ ವೈಫಲ್ಯದಿಂದ ಚಿಕಿತ್ಸೆ ಫಲಿಸದೇ ಹರೀಶ್ ಶನಿವಾರ ಸಂಜೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಹರೀಶ್  ಮೃತದೇಹವನ್ನು ಇಂದು ಹೊಸಾಡು ನಿವಾಸಕ್ಕೆ ತಂದಿದ್ದು ಅಂತಿಮ ದರ್ಶನ ಪ್ರಕ್ರಿಯೆ ನಂತರ ಸಕಲ ವಿಧಿವಿಧಾನದೊಂದಿಗೆ ಅಂತ್ಯಸಂಸ್ಕಾರ ನಡೆಸಲಾಯಿತು. ಮೃತ ಹರೀಶ್ ತಂದೆ-ತಾಯಿ, ಇಬ್ಬರು ಹಿರಿಯ ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗ ಸ್ನೇಹಿತರನ್ನು ಅಗಲಿದ್ದಾರೆ.

ಮೃತರ ನಿವಾಸಕ್ಕೆ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ, ಕಾರ್ಯದರ್ಶಿ ನಾಗರಾಜ ರಾಯಪ್ಪನ ಮಠ ಮೊದಲಾದವರು ಭೇಟಿ ನೀಡಿ ಸಾಂತ್ವಾನ ಹೇಳಿದರು.

ನಾಳೆ ಶ್ರದ್ಧಾಂಜಲಿ..

ಪತ್ರಕರ್ತರ ಸಂಘದ ಸದಸ್ಯ ಹರೀಶ್ ಅವರು ಮೃತರಾದ ಪ್ರಯುಕ್ತ ಮೃತರಿಗೆ ಶ್ರದ್ಧಾಂಜಲಿ ಸಭೆಯನ್ನು ದಿನಾಂಕ 5 ಅಕ್ಟೋಬರ್, ಸೋಮವಾರ ಬೆಳಿಗ್ಗೆ 11 ಗಂಟೆಗೆ ಕುಂದಾಪುರ ಸಂಘದ ಕಛೇರಿಯಲ್ಲಿ ಏರ್ಪಡಿಸಲಾಗಿದೆ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ್ ಹೆಮ್ಮಾಡಿ‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Comments are closed.