ಬಂಟರ ಮಾತೃ ಸಂಘ: ತಾಲೂಕು ಸಮಿತಿಯಿಂದ ಪ್ರತಿಭಾ ಪುರಸ್ಕಾರ
ಮಂಗಳೂರು: ವಿದ್ಯಾರ್ಥಿಗಳು ವಿದ್ಯಾವಂತರಾಗಿ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಲಿ, ಶಿಸ್ತು, ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಂಡು ಹಿರಿಯರ, ಸಮಾಜದ ಋಣ ತೀರಿಸುವ ಕೆಲಸದಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳುವಂತಾಗಲಿ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು.
ಬಂಟ್ಸ್ ಹಾಸ್ಟೆಲ್ ನಲ್ಲಿರುವ ಗೀತಾ ಎಸ್.ಎಂ ಶೆಟ್ಟಿ ಸಭಾಭವನದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯ ಆಶ್ರಯದಲ್ಲಿ ಜರಗಿದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ವಿದ್ಯೆಯನ್ನು ಪಡೆಯುವ ಬಗ್ಗೆ ಗಮನ ಹರಿಸಬೇಕು ಎಂದು ಅಜಿತ್ ಕುಮಾರ್ ರೈ ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಸಿ.ಎ ಶಾಂತಾರಾಮ್ ಶೆಟ್ಟಿ ಮಾತನಾಡಿ ಕಲಿಯುವ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಪ್ರಜ್ಞೆಯೂ ಬೇಕು ಜತೆಗೆ ಉತ್ತಮ ವಿದ್ಯಾರ್ಥಿಯಾಗುವ ನಿಟ್ಟಿನಲ್ಲಿ ಗುರಿಯನ್ನು ಇಟ್ಟುಕೊಂಡು ಮುನ್ನಡೆದಾಗ ವಿದ್ಯಾರ್ಥಿಗಳ ಕನಸು ನನಸಾಗುವುದು ಎಂದರು.
ಇನ್ನೋರ್ವ ಮುಖ್ಯ ಅತಿಥಿ ಸಮಾಜ ಸೇವಕ, ಉದ್ಯಮಿ ರಮಾನಾಥ ಶೆಟ್ಟಿ ಬೈಕಂಪಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ನಿಟ್ಟೆಗುತ್ತು ರವಿರಾಜ ಶೆಟ್ಟಿ, ಬಂಟರ ಮಾತೃಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಶೆಟ್ಟಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ರೈ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸಿಂಧು ರೈ ಮತ್ತು ಅಕ್ಷಿತ್ ಶೆಟ್ಟಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಮಂಗಳೂರು ತಾಲೂಕು ಸಮಿತಿಯ ಸಂಚಾಲಕ ಉಲ್ಲಾಸ್ ಆರ್.ಶೆಟ್ಟಿ ಪೆರ್ಮುದೆ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಸಹ ಸಂಚಾಲಕ ಮುರಳೀಧರ್ ಶೆಟ್ಟಿ ಎಡಪದವು ವಂದಿಸಿದರು. ಸುಖೇಶ್ ಚೌಟ ಉಳ್ಳಾಲಗುತ್ತು ಕಾರ್ಯಕ್ರಮ ನಿರ್ವಹಿಸಿದರು.
Comments are closed.