ಕುಂದಾಪುರ: ಪತ್ನಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿ ಆಕೆಯ ಕೊಲೆಗೆ ಯತ್ನಿಸಿದ ಆರೋಪ ಹೊತ್ತಿದ್ದ ಪತಿಯನ್ನು ದೋಷಿ ಎಂದು ತೀರ್ಮಾನಿಸಿ ಕುಂದಾಪುರದಲ್ಲಿನ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನರಹರಿ ಪ್ರಭಾಕರ್ ಮರಾಠೆ ಆದೇಶಿಸಿದ್ದಾರೆ.
ತನ್ನ ಪತ್ನಿಯ ಮೇಲೆ ಅನುಮಾನಿಸಿ ಆಕೆಯನ್ನು ಚೂರಿಯಿಂದ ಚುಚ್ಚಿ ಕೊಲೆಗೆ ಯತ್ನಿಸಿದ ಚಂದ್ರ ಪೂಜಾರಿ ಎನ್ನುವಾತ ಅಪರಾಧಿಯಾಗಿದ್ದು ಈತನಿಗೆ 7 ವರ್ಷ ಸಜೆ, 25 ಸಾವಿರ ದಂಡ ವಿಧಿಸಿ ನ್ಯಾಯಾಲಯ ಆದೇಶ ಮಾಡಿದೆ.
ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತ್ರಾಸಿ ಚರ್ಚ್ ರಸ್ತೆಯ ಜಂಕ್ಷನ್ ಬಳಿ 2016ರ ಫೆಬ್ರವರಿ 19ರಂದು ಅಪರಾಧಿ ಚಂದ್ರ ಪೂಜಾರಿ ತನ್ನ ಪತ್ನಿಯ ಮೇಲೆ ಮಾರಕವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ. 2005ರಲ್ಲಿ ಮದುವೆಯಾಗಿದ್ದ ಈತ ಪೂನಾದಲ್ಲಿ ಉದ್ಯೋಗದಲ್ಲಿದ್ದು ಇಬ್ಬರು ಜೊತೆಗಿದ್ದರು. ಆದರೆ ಚೊಚ್ಚಲ ಹೆರಿಗೆಗೆ ಊರಿಗೆ ಬಂದಿದ್ದ ಪತ್ನಿ ಮೇಲೆ ಅನುಮಾನಗೊಂಡಿದ್ದ ಚಂದ್ರ ಆಗ್ಗಾಗೆ ಊರಿಗೆ ಬಂದು ಚಿತ್ರಹಿಂಸೆ ನೀಡುತ್ತಿದ್ದ. ಘಟನೆ ದಿನದಂದು ಶಾಲೆಗೆ ತೆರಳಿದ್ದ ಮಗನನ್ನು ಕರೆಯಲು ಹೋಗುತ್ತಿದ್ದ ಪತ್ನಿಯನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಅವ್ಯಾಚವಾಗಿ ಬೈದು ಚೂರಿ ಇರಿದು ಪರಾರಿಯಾಗಿದ್ದ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಅಂದಿನ ಗಂಗೊಳ್ಳಿ ಪಿಎಸ್ಐ ಸುಬ್ಬಣ್ಣ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಮಹಜರು ಪ್ರಕ್ರಿಯೆ, ಫಾರೆನ್ಸಿಕ್ ಮಾದರಿಗಳನ್ನು ಸಂಗ್ರಹಿಸಿದ್ದಲ್ಲದೇ ನ್ಯಾಯಾಲಯಕ್ಕೆ ಸಮಗ್ರವಾದ ಚಾರ್ಜ್ ಶೀಟ್ ಸಲ್ಲಿಸಿದ್ದರು. ತರುವಾಯ ಆರೋಪಿ ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದ.
ಕುಂದಾಪುರದಲ್ಲಿರುವ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರಗಳ ವಿಚಾರಣೆ ನಡೆದಿದ್ದು ಅಂದು ಘಟನೆ ನಡೆದ ಬಳಿಕ ಮಹಿಳೆಯ ಹೊಟ್ಟೆ, ಕೈ ಹಾಗೂ ದೇಹದ ಇತರ ಭಾಗಗಳಿಗೆ ಉಂಟಾದ ಮಾರಕಾಯುಧ ಇರಿತದ ಗಾಯಗಳ ಬಗ್ಗೆ ಪರಿಶೀಲಿಸಿದ ವೈದ್ಯರು ನ್ಯಾಯಾಲಯದಲ್ಲಿ ನುಡಿದ ಸಾಕ್ಷ್ಯಗಳು ಪ್ರಾಸಿಕ್ಯೂಶನ್ ವಾದವನ್ನು ಬಲಪಡಿಸಿತ್ತು.
ಸಾಕ್ಷ್ಯಾಧಾರಗಳ ವಿಚಾರಣೆ ಬಳಿಕ ಆರೋಪಿ ಚಂದ್ರ ಪೂಜಾರಿ ದೋಷಿಯೆಂದು ತೀರ್ಮಾನಿಸಿದ ನ್ಯಾಯಾಲಯ ಸೆಕ್ಷನ್ 307(ಕೊಲೆ ಯತ್ನ) ಪ್ರಕರಣಕ್ಕೆ 7 ವರ್ಷ ಸಜೆ, 25 ಸಾವಿರ ದಂಡ ಹಾಗೂ ಸೆಕ್ಷನ್ 504(ಅವ್ಯಾಚವಾಗಿ ಬೈದಿದ್ದಕ್ಕೆ) ಒಂದು ಸಾವಿರ ದಂಡ ವಿಧಿಸಿದ್ದು ನೊಂದ ಪತ್ನಿಗೆ 20 ಸಾವಿರ ಪರಿಹಾರ ನೀಡಲು ಆದೇಶಿಸಿದೆ.
ಪ್ರಾಸಿಕ್ಯೂಶನ್ ಪರ ಉಡುಪಿ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ವಾದ ಮಂಡಿಸಿದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.