ಚೆನ್ನೈ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆ ಹಾಗೂ ಬಹುಭಾಷಾ ನಟಿ ಖಷ್ಟೂ ಸುಂದರ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಇದೀಗ ಬಿಜೆಪಿ ಸೇರ್ಪಡೆಯಾಗಿದ್ದು, ಈ ಮೂಲಕ ಅವರ ವಿರುದ್ಧ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಇರುವಂತೆಯೇ ನಟಿ ಖುಷ್ಬೂ ಸುಂದರ್ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಬಿಜೆಪಿಯ ಕೇಂದ್ರ ಕಚೇರಿಯಲ್ಲಿಂದು ನಡೆದ ಸರಳ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ , ಅಧಿಕೃತವಾಗಿ ಪಕ್ಷದ ಸದಸ್ಯತ್ವವನ್ನು ನೀಡುವ ಮೂಲಕ ಖುಷ್ಬೂ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರ, ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್. ಮುರುಗನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಸಿ. ಟಿ. ರವಿ ಅವರು, ತಮಿಳುನಾಡು ಬಿಜೆಪಿ ಅಧ್ಯಕ್ಷ ಮುರುಗನ್ ನೇತೃತ್ವದಲ್ಲಿ ನಟಿ ಖುಷ್ಬೂ ಪಕ್ಷದ ಬಲವರ್ದನೆಗೆ ಶ್ರಮಿಸಲಿದ್ದಾರೆ ಎಂಬ ವಿಶ್ವಾಸವಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರ ನೇತೃತ್ವದಲ್ಲಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸುವುದಾಗಿ ಹೇಳಿದ್ದಾರೆ.
ರವಿವಾರವೇ ಬಿಜೆಪಿ ಸೇರ್ಪಡೆಯಾಗಿದ್ದಾರೆಂಬ ವದಂತಿ:
ತಮಿಳುನಾಡಿನ ಕಾಂಗ್ರೆಸ್ ನಾಯಕಿ ಖುಷ್ಬೂ ಸುಂದರ್ ಅವರನ್ನು ಎಐಸಿಸಿ ವಕ್ತಾರೆ ಹುದ್ದೆಯಿಂದ ಕಾಂಗ್ರೆಸ್ ಕೆಳಗಿಳಿಸಿದ್ದು, ಈ ಬಳಿಕ ತಾವೇ ಪಕ್ಷದಿಂದ ಹೊರಹೋಗಿದ್ದಾರೆ ಎಂದು ಹೇಳಲಾಗಿತ್ತು.ಈ ನಡುವೆ ಖುಷ್ಬೂ ನವದೆಹಲಿಗೆ ತೆರಳಿದ್ದಾರೆ. ಅಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು.
ಆದರೆ ನಿನ್ನೆ ಸಂಜೆಯಷ್ಟೇ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು ರಾಜೀನಾಮೆ ನೀಡಿದ್ದ ಖುಷ್ಬೂ ಅವರ ಮುಂದಿನ ನಡೆ ಏನು ಎಂಬ ಬಗ್ಗೆ ಎದ್ದಿದ್ದ ಪ್ರಶ್ನೆ, ಅನುಮಾನಗಳೀಗ ಇದೀಗ ಖಷ್ಟೂ ಸುಂದರ್ ಅವರು ಬಿಜೆಪಿ ಸೇರ್ಪಡೆಯಾಗುವ ಮೂಲಕ ಎಲ್ಲಾ ವಿವಾದಗಳಿಗೆ ತೆರೆ ಬಿದ್ದಿದೆ.
2014ರ ಚುನಾವಣೆಯಲ್ಲಿ ಸೋತರೂ ಕಾಂಗ್ರೆಸ್ನ ಸಿದ್ಧಾಂತದಿಂದಾಗಿ ತಾನು ಪಕ್ಷಕ್ಕೆ ಸೇರ್ಪಡೆಯಾಗಿದ್ದೆ. ಹೆಸರು, ಕೀರ್ತಿ, ಹಣದ ಆಸೆ ಇರದ ಕಾರಣ ಅಲ್ಲಿಯೇ ಮುಂದುವರೆಯಲು ಇಚ್ಛಿಸಿದ್ದೆ. ಆದರೆ ಉನ್ನತ ಸ್ಥಾನದಲ್ಲಿ ಇರುವ ಕೆಲವರಿಗೆ ರಾಜಕೀಯದ ಮೂಲವೇ ಗೊತ್ತಿಲ್ಲ. ಉನ್ನತ ಸ್ಥಾನದಲ್ಲಿ ಇದ್ದವರು ಆಳುತ್ತಿರುವುದನ್ನು ನಾನು ನೋಡಲಾರೆ. ಈ ಎಲ್ಲಾ ಕಾರಣಗಳಿಂದ ತನಗೆ ಕಾಂಗ್ರೆಸ್ನಲ್ಲಿ ಇರಲು ಇಷ್ಟವಿಲ್ಲ ಆದ್ದರಿಂದ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಖಷ್ಟೂ ಅವರು ನಿನ್ನೆಯಷ್ಟೇ ಟ್ವಿಟ್ ಮಾಡಿದ್ದರು.
ತಮ್ಮ ಟ್ವೀಟರ್ ಖಾತೆಯಲ್ಲಿ ತಿಲಕವೇ ಎದ್ದುಕಾಣುವಂಥ ಫೋಟೋ ಹಾಕಿಕೊಂಡಿದ್ದ ಖುಷ್ಬೂ ಅವರು ಹಲವರು ನನ್ನಲ್ಲಿ ಬದಲಾವಣೆಗಳನ್ನು ಗುರುತಿಸುತ್ತಿದ್ದಾರೆ. ನಾವೆಲ್ಲರೂ ಕಲಿಯುತ್ತಾ ಬೆಳೆಯುತ್ತೇವೆ, ಇಷ್ಟ-ಅನಿಷ್ಟ, ಯೋಚನೆ ಮತ್ತು ಸಿದ್ಧಾಂತಗಳು ಹೊಸ ಕನಸಿನೊಂದಿಗೆ ಹೊಸ ರೂಪ ಪಡೆಯುತ್ತಿವೆ. ನೀವು ಇಷ್ಟ ಮತ್ತು ಪ್ರೀತಿಯ ಜತೆಗಿನ ವ್ಯತ್ಯಾಸ ಹಾಗೂ ತಪ್ಪು ಮತ್ತು ಸರಿಗಳ ಮಧ್ಯೆಯ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳಿ. ಜೀವನದಲ್ಲಿ ಬದಲಾವಣೆ ಅನಿವಾರ್ಯ ಎಂದು ಹೇಳುವ ಮೂಲಕ ಕಾಂಗ್ರೆಸ್ ಬಿಟ್ಟು, ಬೇರೆ ಪಕ್ಷವನ್ನು ಸೇರುವ ಕುರಿತು ಹಿಂಟ್ ನೀಡಿದ್ದರು.
ಆದರೆ, ನಿನ್ನೆ ರಾಷ್ಟ್ರ ರಾಜಧಾನಿಗೆ ತೆರಳುತ್ತಿದ್ದಾಗ, ‘ಖುಷ್ಬೂ ಅವರು ಕಾಂಗ್ರೆಸ್ ತೊರೆಯುತ್ತೀರಾ?’ ಎಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರು ಪ್ರಶ್ನಿಸಿದಾಗ “ಯಾವುದೇ ಪ್ರತಿಕ್ರಿಯೆ ಇಲ್ಲ” ಎಂದಿದ್ದರು. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನೂತನ ರಾಷ್ಟ್ರೀಯ ನೀತಿಯನ್ನು ಕೊಂಡಾಡುವ ಮೂಲಕ, ಬಿಜೆಪಿ ಸೇರುವ ಕುರಿತೂ ಸೂಚ್ಯವಾಗಿ ತಿಳಿಸಿದ್ದರು. ಮಾತ್ರವಲ್ಲದೇ ಇತ್ತೀಚೆಗೆ ಖುಷ್ಬೂ ಅವರು ಕೇಂದ್ರದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ಅನ್ನು ಸ್ವಾಗತಿಸಿದ್ದರು. ಅವರ ಕೆಲವು ಹೇಳಿಕೆಯು ಟ್ವಿಟ್ಟರ್ನಲ್ಲಿ ಸಂಚಲನವನ್ನುಂಟು ಮಾಡಿತ್ತು.
ಆದರೆ ಇದೀಗ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಎಲ್. ಮುರುಗನ್ ಅವರ ಉಪಸ್ಥಿತಿಯಲ್ಲಿ ಖುಷ್ಬು ಅವರು ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.
ಇದೇ ವೇಳೆ ಮುಂದಿನ ವರ್ಷ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದೆ ನಿರಾಸೆಗೊಂಡಿದ್ದ ಖುಷ್ಬೂ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿ ಬಿಜೆಪಿ ಭರವಸೆ ನೀಡಿದ ಬಳಿಕ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
Comments are closed.