ಕರಾವಳಿ

ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಕೊರೊನಾ ನಿಯಮಾವಳಿಗಳಂತೆ ನವರಾತ್ರಿ ಉತ್ಸವ

Pinterest LinkedIn Tumblr

ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಯುವ ನವರಾತ್ರಿ ಉತ್ಸವಕ್ಕಾಗಿ ದೇಗುಲದ ಆಡಳಿತ ವ್ಯವಸ್ಥೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದು, ವಿಶ್ವವೇ ಕೊರೊನಾ ಸಂಕಷ್ಟದ ಸಮಯದಲ್ಲಿ ಇರುವುದರಿಂದ ಈ ಬಾರಿಯ ಉತ್ಸವಕ್ಕಾಗಿ ಬರುವ ಭಕ್ತರು ಕೊರೊನಾ ನಿಯಮಾವಳಿಗಳನ್ನು ಪಾಲಿಸಬೇಕಾದ ಆದ್ಯತೆ ಇದೆ.

ಅ.17 ರಿಂದ ಪ್ರಾರಂಭಗೊಳ್ಳುವ ನವರಾತ್ರಿಯ ಉತ್ಸವದ ಆಚರಣೆಗಳು ಅ.25 ರವರೆಗೂ ನಡೆಯಲಿದೆ. ನವರಾತ್ರಿಯ ಅಂಗವಾಗಿ ದೆವಸ್ಥಾನದಲ್ಲಿ ದಿನಂಪ್ರತಿ ನಡೆಯುವ ಕಟ್ಟಕಟ್ಟಳೆ ಪೂಜೆಗಳ ಜತೆಯಲ್ಲಿ ನವರಾತ್ರಿಯ ವಿಶೇಷ ಪೂಜೆ ಹಾಗೂ ಉತ್ಸವಗಳು ನಡೆಯಲಿದೆ. ಅ.24 ರಂದು ಸೋಮವಾರ ಮಹಾ ನವಮಿಯ ಪ್ರಯುಕ್ತ ಬೆಳಿಗ್ಗೆ 11.30 ಕ್ಕೆ ಚಂಡಿಕಾಯಾಗ ಹಾಗೂ ರಾತ್ರಿ 10.30 ಕ್ಕೆ ರಥೋತ್ಸವ ಜರುಗಲಿದೆ.

ಅ.25 ರಂದು ಭಾನುವಾರ ವಿಜಯದಶಮಿಯ ಪ್ರಯುಕ್ತ ಬೆಳಿಗ್ಗೆ ವಿದ್ಯಾರಂಭ, ನವಾನ್ನ ಪ್ರಾಶನ ಹಾಗೂ ಶ್ರೀ ಮೂಕಾಂಬಿಕಾ ದೇವಿಯ ವಿಜಯೋತ್ಸವ ನಡೆಯಲಿದೆ. ಈ ಹಿಂದೆ ನವರಾತ್ರಿಯ ಉತ್ಸವ ಆಚರಣೆಯ ದಿನಗಳಲ್ಲಿ ಪ್ರತಿ ದಿನ ಅಪರಾಹ್ನ 3.00 ಗಂಟೆಯಿಂದ ರಾತ್ರಿ 11ರ ವರೆಗೆ ದೇಶದ ವಿವಿಧ ಭಾಗದ ಕಲಾ ತಂಡಗಳಿಂದ ಸೇವಾರೂಪವಾಗಿ ಶ್ರೀ ದೇವಳದ ಸ್ವರ್ಣಮುಖಿ ರಂಗಮಂದಿರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುತ್ತಿದ್ದವು. ಈ ಬಾರಿ ಕೋವಿಡ್‌ ನಿಯಮಾವಳಿಗಳ ಪಾಲನೆ ಕಡ್ಡಾಯವಾಗಿರುವುದರಿಂದ ಯಾವುದೆ ಕಲಾ ತಂಡಗಳಿಗೂ ಕಲಾ ಸೇವೆಗೆ ಅವಕಾಶ ನೀಡಿಲ್ಲ.

ನವರಾತ್ರಿ ಪ್ರಾರಂಭವಾದ ದಿನದಿಂದ 8ನೇ ದಿನದ ವರೆಗೆ ಶ್ರೀ ಮೂಕಾಂಬಿಕಾ ದೇವಿಗೆ ಯೋಗಾನಿದ್ರಾ ದುರ್ಗಾ, ದೇವಜಾತಾ ದುರ್ಗಾ, ಮಹಿಷಾಸುರಮರ್ದೀನಿ ದುರ್ಗಾ, ಶೈಲಜಾ ದುರ್ಗಾ, ಧೂಮ್ರಾ: ದುರ್ಗಾ, ಚಂಡ-ಮುಂಡ ದುರ್ಗಾ, ರಕ್ತಬೀಜಾ ದುರ್ಗಾ, ನಿಶುಂಭಾ: ದುರ್ಗಾ ಪೂಜೆಗಳು ನಡೆಯುತ್ತದೆ. ಮೊದಲ ದಿನದಿಂದ ಪ್ರಾರಂಭವಾಗಿ 9ನೇ ದಿನದವರೆಗೂ ಪ್ರತಿ ದಿನ ಸಂಜೆ ಸುಹಾಸಿನಿ ಪೂಜೆ ನಡೆಯುತ್ತದೆ. 9ನೇ ದಿನ ಕಟ್ಟಕಟ್ಟಳೆ ಪೂಜೆಗಳ ಜತೆಯಲ್ಲಿ ಶತರುದ್ರಾಭೀಷೇಕ, ಕಲ್ಪೋಕ್ತ ಪೂಜೆ ಹಾಗೂ ಶುಂಭಾ: ದುರ್ಗಾ ಪೂಜೆಗಳ ಜತೆಯಲ್ಲಿ ಚಂಡಿಕಾ ಯಾಗ ನಡೆಯುತ್ತದೆ.

ಕ್ಷೇತ್ರಕ್ಕಾಗಮಿಸುವ ಭಕ್ತರಿಗೆ ಯಾವುದೆ ತೊಂದರೆಯಾಗದಂತೆ ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ಕುಂದಾಪುರದ ಉಪವಿಭಾಗಾಧಿಕಾರಿ ಕೆ.ರಾಜು ಅವರ ಮಾರ್ಗದರ್ಶನದಲ್ಲಿ ಹಲವು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭಕ್ತರಿಗೆ ಎಲ್ಲ ರೀತಿಯ ಸೇವೆಗಳಿಗೂ ಅವಕಾಶ ನೀಡಲಾಗಿದೆ. ವಸತಿ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ. ದಿನದ 24 ಗಂಟೆ ಉಚಿತ ತುರ್ತು ಆರೋಗ್ಯ ಚಿಕಿತ್ಸಾ ಕೇಂದ್ರದ ಸೌಲಭ್ಯ ಕಲ್ಪಿಸಲಾಗಿದೆ. ಭಕ್ತರ ವಾಹನ ನಿಲುಗಡೆಗಾಗಿ ಈಗ ಇರುವ ವಾಹನ ಪಾರ್ಕಿಂಗ್‌ ಸ್ಥಳದ ಜೊತೆಗೆ ಅಗತ್ಯ ಬಿದ್ದಲ್ಲಿ ಹೆಚ್ಚುವರಿಯಾಗಿ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿರುವ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು, ಪ್ರತಿ ದಿವಸ ಶ್ರೀ ದೇವಳದ ದಾಸೋಹ ಭವನದಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ರಥೋತ್ಸವಕ್ಕೆ ಭಕ್ತರಿಗೆ ನಿರ್ಬಂಧ
ಅ.24 ರಂದು ರಾತ್ರಿ ದೇವಸ್ಥಾನದ ಪ್ರಾಂಗಣದಲ್ಲಿ ನಡೆಯುವ ಶ್ರೀದೇವಿಯ ವೈಭವದ ಪುಷ್ಪ ರಥೋತ್ಸವದಲ್ಲಿ ಪಾಲ್ಗೊಳ್ಳಲು ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ. ಈ ಉತ್ಸವದಲ್ಲಿ ರಾಜ್ಯ ಹಾಗೂ ಹೊರ ರಾಜ್ಯದಿಂದ ಬರುವ ಸಾವಿರಾರು ಭಕ್ತರು ಸೇರುವುದರಿಂದ, ಪರಸ್ಪರ ಅಂತರ ಪಾಲನೆ ಕಷ್ಟವಾಗಿರುವುದರಿಂದ, ಆ ದಿನ ಸಂಜೆ 5 ಗಂಟೆಯ ಬಳಿಕ ಭಕ್ತರಿಗೆ ದೇವಸ್ಥಾನ ಪ್ರವೇಶವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.

ದೀಪಾಲಂಕಾರ : ನವರಾತ್ರಿ ಸಂಭ್ರವದ ಅಂಗವಾಗಿ ಪ್ರತಿ ವರುಷದಂತೆ ಅದ್ದೂರಿಯಾಗಿ ದೇವಸ್ಥಾನಕ್ಕೆ ವಿದ್ಯುತ್ ದೀಪ ಹಾಗೂ ಹೂವಿನ ಅಲಂಕಾರ ಮಾಡದೆ ಇದ್ದರೂ ಪರಂಪರೆಗೆ ಅನುಗುಣವಾಗಿ ಸರಳ ರೀತಿಯಲ್ಲಿ ಉತ್ಸವದ ದಿನಗಳಲ್ಲಿ ದೇವಸ್ಥಾನಕ್ಕೆ ದೀಪಾಲಂಕಾರ ಹಾಗೂ ಹೂವಿನ ಅಲಂಕಾರ ಮಾಡಲಾಗುತ್ತದೆ.

ಈ ಬಾರಿಯ ನವರಾತ್ರಿ ಉತ್ಸವ ಶನಿವಾರದಿಂದ ಆರಂಭವಾಗಿರುವುದರಿಂದ ಮೊದಲ ದಿನದಿಂದಲೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಕೊರನಾ ನಿಯಮಾವಳಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಜತೆಯಲ್ಲಿ ಭಕ್ತರಿಗೆ ಯಾವುದೆ ರೀತಿಯ ತೊಂದರೆಯಾಗದಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
– ಕೆ.ರಾಜು. ಉಪವಿಭಾಗಾಧಿಕಾರಿ ಹಾಗೂ ಆಡಳಿತಾಧಿಕಾರಿ ಕೊಲ್ಲೂರು ಶ್ರೀ ಕ್ಷೇತ್ರ

Comments are closed.