ಕುಂದಾಪುರ: ಬೈಂದೂರು ತಾಲೂಕಿನ ಪಡುವರಿ ಗ್ರಾಮದ ಒತ್ತಿನಣೆ ಬಳಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಬೈಂದೂರು ವೃತ್ತ ನಿರೀಕ್ಷಕರ ಪೊಲೀಸ್ ಇಲಾಖಾ ಜೀಪು ಪಲ್ಟಿಯಾದ ಪರಿಣಾಮ ಬೈಂದೂರು ಇನ್ಸ್‌ಪೆಕ್ಟರ್ ಹಾಗೂ ಜೀಪು ಚಾಲಕ ಗಾಯಗೊಂಡ ಘಟನೆ ನಡೆದಿದೆ.
ತಡರಾತ್ರಿ ಬೀಟ್ ಕರ್ತವ್ಯದಲ್ಲಿದ್ದ ಇನ್ಸ್‌ಪೆಕ್ಟರ್ ಸುರೇಶ್ ನಾಯ್ಕ್, ಜೀಪು ಚಾಲಕ ಹೇಮರಾಜ್ ಅವರಿಗೆ ಅಪಘಾತದಲ್ಲಿ ಗಾಯವಾಗಿದ್ದು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಶಿರೂರಿನಿಂದ ಬೈಂದೂರು ಕಡೆ ಬರುವಾಗ ರಾಘವೇಂದ್ರ ಸ್ವಾಮಿ ಮಠದ ಬಳಿ ಇಲಾಖಾ ಜೀಪು ನಿಯಂತ್ರಣ ತಪ್ಪಿ ಇನ್ನೊಂದು ರಸ್ತೆಯ ಬದಿಯ ಚರಂಡಿಗೆ ಅಡಿಮೇಲಾಗಿ ಬಿದ್ದು ಅಪಘಾತಗೊಂಡಿದೆ. ಜೀಪ್ ನಲ್ಲಿದ್ದ ವೃತ್ತ ನಿರೀಕ್ಷಕರಾದ ಸುರೇಶ್ ನಾಯ್ಕ್ ರವರ ಕಾಲಿಗೆ ಹಾಗೂ ಜೀಪ್ ಚಾಲಕ ಹೇಮರಾಜ್ ರವರ ತಲೆ, ಕೈ, ಕಾಲಿಗೆ ಪೆಟ್ಟಾಗಿದ್ದು, ಅಪಘಾತದ ರಭಸಕ್ಕೆ ಜೀಪು ಸಂಪೂರ್ಣ ನಜ್ಜುಗುಜ್ಜಾಗಿದ್ದು ಜೀಪ್ ನಲ್ಲಿ ಸಿಕ್ಕಿಬಿದ್ದ ಇಬ್ಬರನ್ನು ಹೊರತೆಗೆಯಲು ಸುಮಾರಯ ಒಂದು ತಾಸು ಕಾರ್ಯಾಚರಣೆ ಮಾಡಬೇಕಾಗಿತ್ತು. ಸತತ ಹೋರಾಟದ ಬಳಿಕ ಕ್ರೇನ್ ಮೂಲಕ ಜೀಪ್ ಎತ್ತಿ ನಂತರ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸುಮಾರು 2.15 ಗಂಟೆಗೆ ಒಳರೋಗಿಯಾಗಿ ದಾಖಲೆ ಮಾಡಲಾಗಿದೆ.
ಆಸ್ಪತ್ರೆಗೆ ಉಡುಪಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಗೋಪಿಕೃಷ್ಣ, ಟ್ರಾಫಿಕ್ ಪಿಎಸ್ಐ ಸುದರ್ಶನ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
Comments are closed.