ಮಂಗಳೂರು/ ಮುಂಬಾಯಿ, ಆಕ್ಟೋಬರ್.21: ಬಿಲ್ಲವ ಸಮಾಜದ ಮುಖಂಡ ಭಾರತ್ ಬ್ಯಾಂಕ್ ನ ಮಾಜಿ ಅಧ್ಯಕ್ಷ, ಬಡವರ ಬಂಧು ಎಂದು ಕರೆಯಲ್ಪಡುತ್ತಿದ್ದ ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಸ್ಥಾಪಕ ಜಯ ಸಿ ಸುವರ್ಣ (82) ಅವರು ಇಂದು (ಅಕ್ಟೋಬರ್.21) ಮುಂಜಾನೆ ಮುಂಬೈಯ ಅವರ ನಿವಾಸದಲ್ಲಿ ವಿಧಿವಶರಾಗಿದ್ದಾರೆ.
ಮೃತರು ಪತ್ನಿ ಲೀಲಾವತಿ ಜಯ ಸುವರ್ಣ, ಮಕ್ಕಳಾದ ಸೂರ್ಯಕಾಂತ್ ಜೆ. ಸುವರ್ಣ, ಸುಭಾಶ್ ಜೆ. ಸುವರ್ಣ, ದಿನೇಶ್ ಜೆ. ಸುವರ್ಣ, ಯೋಗೇಶ್ ಜೆ. ಸುವರ್ಣ ಹಾಗೂ ಬಂಧುಗಳು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಬಿಲ್ಲವರ ಅಸೋಸಿಯೇಶನ್ ಮುಂಬಯಿಯ ಮಾಜಿ ಅಧ್ಯಕ್ಷರಾಗಿ, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರುವಾರಿಯಾಗಿದ್ದ ಅವರು ಆಡಳಿತ ಸಮಿತಿ ಗೌರವಾಧ್ಯಕ್ಷರಾಗಿಯೂ ಕಾರ್ಯ ನಿರ್ವಾಹಿಸಿದ್ದರು., ಬಿಲ್ಲವ ಮಹಾಮಂಡಲದ ಗೌರವ ಅಧ್ಯಕ್ಷ, ಸಮಾಜದ ಅಭಿವೃದ್ಧಿಯ ಹರಿಕಾರ, ಮುಂಬೈ ಬಿಲ್ಲವ ಭವನದ ರೂವಾರಿ, ನಾರಾಯಣ ಗುರು ಅರ್ಬನ್ ಕೋ. ಆಪರೇಟಿವ್ ಬ್ಯಾಂಕ್ ನ ಪ್ರವರ್ತಕರಾಗಿದ್ದರು.
ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಆಡಳಿತ ಮಂಡಳಿ ಮತ್ತು ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿ, ಗೆಜ್ಜೆಗಿರಿ ನಂದನ ಬಿತ್ತಿಲ್ ನ ಗೌರವಾಧ್ಯಕ್ಷರಾಗಿ, ಬಿಲ್ಲವ ಭವನ ಮುಂಬಯಿ ಮತ್ತು ಮಹಾಮಂಡಲ ಭವನ ಮುಲ್ಕಿ ಇದರ ನಿರ್ಮಾತೃವಾಗಿದ್ದರು.
ಮುಂಬಯಿಯಲ್ಲಿ ಹೊಟೇಲ್ ಉದ್ಯಮಿಯಾಗಿರುವ ಜಯ ಸಿ.ಸುವರ್ಣ ಅವರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಮುಂಬಯಿ ಭಾರತ್ ಕೋ-ಅಪರೇಟಿವ್ ಬ್ಯಾಂಕ್ ನ ಕಾರ್ಯಾಧ್ಯಕ್ಷರಾಗಿ ಬ್ಯಾಂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದರು.
ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿಯವರ ನಿಕಟವರ್ತಿ, ದೇಶ ವಿದೇಶಗಳಲ್ಲಿ ಎಲ್ಲಾ ಜಾತಿಯ ಸಂಘ ಸಂಸ್ಥೆಗಳಲ್ಲಿ ಉತ್ತಮ ಭಾಂದವ್ಯ ಹೊಂದಿದ್ದರು. ಎಲ್ಲಾ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದಂತಹ ಕೊಡುಗೈದಾನಿ, ಸಮಾಜದ ಪ್ರತಿಯೊಂದು ಕಾರ್ಯಕ್ರಮದಲ್ಲೂ ಮುಂಚೂಣಿಯಲ್ಲಿದ್ದು ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಮೃತರ ಅಂತ್ಯಕ್ರಿಯೆ ಅಕ್ಟೋಬರ್.21ರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
ಗಣ್ಯರಿಂದ ಸಂತಾಪ:
ಶ್ರೀಯುತರ ನಿಧನಕ್ಕೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್. ಸಾಯಿರಾಮ್, ಕೋಶಾಧಿಕಾರಿ ಪದ್ಮರಾಜ್ ಆರ್, ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಡಾ .ರಾಜಶೇಖರ ಕೋಟ್ಯಾನ್, ಮುಂಬಯಿ ಬಿಲ್ಲವರ ಅಸೋಸಿಯೇಷನ್ ನ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ಮಾಜಿ ಅಧ್ಯಕ್ಷರಾದ ಎಲ್.ವಿ. ಅಮೀನ್, ನಿತ್ಯಾನಂದ ಕೋಟ್ಯಾನ್, ನಾರಾಯಣ ಗುರು ಅರ್ಬನ್ ಕೋ. ಅಪರೇಟಿವ್ ಬ್ಯಾಂಕ್ ನ ಅಧ್ಯಕ್ಷ ಹರೀಶ್ಚಂದ್ರ ಅಮೀನ್, ಭಾರತ್ ಬ್ಯಾಂಕ್ ನ ಅಧ್ಯಕ್ಷ ಉಪ್ಪೂರು ಶಿವಾಜಿ ಪೂಜಾರಿ ಹಾಗೂ ಸಮಾಜದ ವಿವಿಧ ಗಣ್ಯರು ಸೇರಿದಂತೆ ಅಪಾರ ಸಂಖ್ಯೆಯ ಅವರ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.
Comments are closed.