ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಟ ಸರ್ಕಾರ ರಚಿಸಲು ಅಗತ್ಯವಾಗಿರುವ ‘ಮ್ಯಾಜಿಕ್ ಸಂಖ್ಯೆ’ ದಾಟಿದ್ದು, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ಸತತ ಆರನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಖಚಿತವಾಗಿದೆ.
ಮಂಗಳವಾರ ಪ್ರಕಟಗೊಂಡ ಫಲಿತಾಂಶದಲ್ಲಿ ಎನ್‌ಡಿಎ ಮೈತ್ರಿಕೂಟ 125, ಮಹಾಘಟ್‌ಬಂಧನ್ 110, ಎಲ್‌ಜೆಪಿ ಒಂದು ಹಾಗೂ ಇತರರು ಏಳು ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದ್ದಾರೆ. 75 ಸ್ಥಾನಗಳಲ್ಲಿ ಗೆಲುವು ಪಡೆಯವ ಮೂಲಕ ಆರ್‌ಜೆಡಿಯು ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶವು ಮತಗಟ್ಟೆ ಸಮೀಕ್ಷೆಯ ಎಲ್ಲ ಅಂದಾಜುಗಳನ್ನು ಸುಳ್ಳಾಗಿಸಿ ಮತ್ತೆ ಎನ್‌ಡಿಎಗೆ ಅಧಿಕಾರ ನೀಡಿದೆ. ಬಿಹಾರದ ಮುಂದಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಎಂದು ಬಿಜೆಪಿ ಈಗಾಗಲೇ ಘೋಷಿಸಿದೆ.
ಇದರೊಂದಿಗೆ ಎನ್‌ಡಿಎ ಮೈತ್ರಿಕೂಟದ ಜೆಡಿ(ಯು) ನಾಯಕ ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ದಿನಾಂಕ ನಿಗದಿಯಾಗಿದೆ. ದೀಪಾವಳಿ ನಂತರ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ರಾಜ್ಯಸಭಾ ಸದಸ್ಯ, ಜೆಡಿ(ಯು) ನಾಯಕ ಕೆ.ಸಿ. ತ್ಯಾಗಿ ತಿಳಿಸಿದ್ದಾರೆ.
ನಿತೀಶ್ ಕುಮಾರ್ ಅವರು ವಿಧಾನ ಪರಿಷತ್ ಸದಸ್ಯರಾಗಿಯೇ ಮುಂದುವರೆದಿದ್ದಾರೆ. ಜನತಾದಳ (ಸಂಯುಕ್ತ ) ಪಕ್ಷದ ಮುಖ್ಯಸ್ಥ ರಾಗಿರುವ ನಿತೀಶ್ ಕುಮಾರ್ ಅವರು 1977 ರ ಚುನಾವಣೆಯಲ್ಲಿ ನಳಂದಾ ಜಿಲ್ಲೆಯ ಹಾರ್ನೋತ್ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿ, ಸೋತಿದ್ದರು. ನಂತರ ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಆರು ಬಾರಿ (1989, 1991, 1996, 1998, 1999, 2004). ಗೆಲುವು ಸಾಧಿಸಿದ್ದಾರೆ.
ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು 2000 (8 ದಿನಗಳು), 2005, 2010, 2015, 2017 ರಲ್ಲಿ ಒಟ್ಟು ಐದು ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೀಗ ಸತತ ಆರನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ದತೆ ನಡೆಸಿದ್ದಾರೆ.
Comments are closed.