ಲಯನ್ಸ್ ಕ್ಲಬ್ ಮಂಗಳೂರು – ‘ಕನ್ನಡ ಡಿಂಡಿಮ’ ರಾಜ್ಯೋತ್ಸವ ಸಂಭ್ರಮ /
ರಾಜ್ಯೋತ್ಸವ ನಾಡಿನ ಸಂಸ್ಕೃತಿ ಪರಂಪರೆಗೆ ಬೆಳಕಾಗಲಿ : ಭಾಸ್ಕರ ರೈ ಕುಕ್ಕುವಳ್ಳಿ
ಮಂಗಳೂರು: ‘ಕನ್ನಡ ರಾಜ್ಯೋತ್ಸವದ ಆಚರಣೆ ಒಂದು ದಿನ ಅಥವಾ ನವೆಂಬರ್ ಮಾಸಾಂತ್ಯವರೆಗೆ ಮಾತ್ರ ಸೀಮಿತವಲ್ಲ. ಅದು ನಿತ್ಯೋತ್ಸವ ವಾಗಬೇಕು. ನಾಡಿನ ಸಂಸ್ಕೃತಿ – ಪರಂಪರೆಗೆ ಬೆಳಕು ತೋರುವ ಆಚರಣೆಯಾಗಬೇಕು.
ಕರ್ನಾಟಕದ ಗತೇತಿಹಾಸ,ಕಲೆ – ಸಾಹಿತ್ಯ ಹಾಗೂ ಜನಜೀವನ ಬೆಳೆದುಬಂದ ಬಗೆಯನ್ನು ಎಳೆಯ ತಲೆಮಾರಿಗೆ ತಿಳಿಹೇಳುವ ಕಾರ್ಯಕ್ರಮಗಳು ವಿವಿಧ ಸಂಘಟನೆಗಳ ಮೂಲಕ ನಡೆಯಬೇಕು’ ಎಂದು ಸಾಹಿತಿ – ಸಂಘಟಕ ಮತ್ತು ಯಕ್ಷಗಾನ ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಲಯನ್ಸ್ ಕ್ಲಬ್ ಮಂಗಳೂರು ಇವರು ನಗರದ ಮಲ್ಲಿಕಟ್ಟೆ ಲಯನ್ಸ್ ಸೇವಾ ಮಂದಿರದಲ್ಲಿ ಏರ್ಪಡಿಸಿದ್ದ ‘ಕನ್ನಡ ಡಿಂಡಿಮ’ ಕನ್ನಡ ರಾಜ್ಯೋತ್ಸವ ಸಂಭ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
‘ಆಧುನಿಕ ಜೀವನಶೈಲಿಯಲ್ಲಿ ಆಂಗ್ಲ ಮಾಧ್ಯಮದ ಶಿಕ್ಷಣ ಹಾಗೂ ವಿದೇಶಿ ಮೂಲದ ವಿವಿಧ ಉದ್ಯಮಗಳ ಪ್ರಭಾವ ಬಹಳಷ್ಟಿದೆ. ಇಂತಹ ಸಂಕೀರ್ಣ ಸಂದರ್ಭದಲ್ಲಿ ನಾಡು-ನುಡಿಯ ಕುರಿತಾದ ನಮ್ಮ ಕರ್ತವ್ಯ ಗಳನ್ನು ಜಾಗೃತಗೊಳಿಸುವ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ. ಮಾತೃಭಾಷೆಯಲ್ಲಿ ಶಿಕ್ಷಣ ಮತ್ತು ವ್ಯವಹಾರದಲ್ಲಿ ಕನ್ನಡವನ್ನು ಬಳಸುವ ನಿಟ್ಟಿನಲ್ಲಿ ಕನ್ನಡಿಗರು ಪಕ್ಷಬೇಧ ಮರೆತು ಒಗ್ಗಟ್ಟಿನಿಂದ ಶ್ರಮಿಸಬೇಕು’ ಎಂದವರು ನುಡಿದರು.
ಸಾಧಕ ಸನ್ಮಾನ : ಸಮಾರಂಭದಲ್ಲಿ ಹಿರಿಯ ರಂಗಭೂಮಿ ನಟ ಹಾಗೂ ನಾಟಕಕಾರ ವಸಂತ ವಿ.ಅಮೀನ್ ಮತ್ತು ಉದಯೋನ್ಮುಖ ಕವಿ ರವೀಂದ್ರ ನಾಯಕ್ ಸಣ್ಣಬೆಟ್ಟು ಅವರನ್ನು ಸನ್ಮಾನಿಸಲಾಯಿತು.
ಲಯನ್ಸ್ ಕ್ಲಬ್ ಮಂಗಳೂರು ಜಿಲ್ಲೆ 317 ಡಿ. ಅಧ್ಯಕ್ಷ ಕರ್ನಿರೆ ಕೃಷ್ಣಾನಂದ ಪೈ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಕ್ಲಬ್ಬಿನ ಕಾರ್ಯದರ್ಶಿ ಪ್ರಶಾಂತ ಭಟ್ ಕಡಬ ಸ್ವಾಗತಿಸಿದರು.
ಸದಸ್ಯೆ ಅರ್ಚನಾ ಕಾಮತ್ ನಾಡಗೀತೆ ಹಾಡಿದರು. ಕಾರ್ಯಕ್ರಮ ಸಂಯೋಜಕ ಯೋಗೇಶ್ ಕುಮಾರ್ ಜೆಪ್ಪು ಅತಿಥಿಗಳನ್ನು ಪರಿಚಯಿಸಿದರು ಕೋಶಾಧಿಕಾರಿ ಸುಧಾಕರ ಶೆಟ್ಟಿ ವಂದಿಸಿದರು. ಬಳಿಕ ಲಯನ್ಸ್ ಮತ್ತು ಲಿಯೋ ಕ್ಲಬ್ ಸದಸ್ಯರಿಂದ ಕನ್ನಡ ನಾಡಗೀತೆ ಹಾಗೂ ಸಮೂಹ ಗಾನ ಕಾರ್ಯಕ್ರಮ ಜರಗಿತು.
Comments are closed.