ಬೆಂಗಳೂರು: ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದೀಪಾವಳಿ ಹಬ್ಬದ ನಿಮಿತ್ತ ರಾಜ್ಯಾದ್ಯಂತ ಪಟಾಕಿ ಮಾರಾಟ ಹಾಗೂ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಸರ್ಕಾರ ಹಸುರು ಪಟಾಕಿ ಮಾತ್ರ ಉಪಯೋಗಿಸುವಂತೆ ಆದೇಶ ನೀಡಿದೆ.
ಈ ನಡುವೆ ನ್ಯಾಯಾಯಲಯ ಕೂಡ ನಿಷೇಧಿತ ಪಟಾಕಿಗಳ ಮಾರಾಟ ಹಾಗೂ ಉಪಯೋಗ ಎರಡೂ ಕಾನೂನು ಬಾಹಿರವಾಗಿದ್ದು, ಸರ್ಕಾರ ಅದೇಶದಂತೆ ಹಸುರು ಪಟಾಕಿಯನ್ನು ಮಾತ್ರ ಬಳಸ ಬೇಕೆಂದು ಸೂಚಿಸಿದೆ.
ಮಾತ್ರವಲ್ಲದೇ ಹಸುರು ಪಟಾಕಿಗೆ ಕೆಲವೊಂದು ಮಾರ್ಗಸೂಚಿಗಳನ್ನು ಮಾಡಿದ್ದು, ಇತರ ಪಟಾಕಿಗಳ ಮಾರಾಟ ಅಥವಾ ಬಳಕೆ ಕಂಡು ಬಂದರೆ ಸಂಬಂಧಿತ ಅಧಿಕಾರಿಗಳು ಮತ್ತು ಪೊಲೀಸರು ಕಾನೂನು ಕ್ರಮಕೈಗೊಳ್ಳುವಂತೆ ಆದೇಶ ಮಾಡಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಪಟಾಕಿ ಮಳಿಗೆಗಳ ಮೇಲೆ ಅಧಿಕಾರಿಗಳು, ಪೊಲೀಸರು ದಾಳಿ ನಡೆಸಿದ್ದಾರೆ. ಬೆಂಗಳೂರು, ಮೈಸೂರು, ದಾವಣಗೆರೆ ಸೇರಿದಂತೆ ಹಲವೆಡೆ ಅಧಿಕಾರಿಗಳು ಹಾಗೂ ಪೊಲೀಸರು ಪಟಾಕಿ ಮಳಿಗೆಗಳ ಮೇಲೆ ದಾಳಿ ಮಾಡಿ ನಿಷೇಧಿತ ಪಟಾಕಿಗಳನ್ನು ವಶಕ್ಕೆ ಪಡೆದಿದ್ದಾರೆ.
ನಿಯಮ ಪಾಲಿಸದ ಮತ್ತು ನಿಷೇಧಿತ ಪಟಾಕಿ ಮಾರಾಟ ಮಾಡಿದ ಕಾರಣಕ್ಕೆ ಹಲವು ವ್ಯಾಪಾರಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎನ್ನಲಾಗಿದೆ.
ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಿದ್ದರೂ ಕೂಡ ನಿಷೇಧಿತ ಪಟಾಕಿಗಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದ ಈ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ರಾಯಚೂರು : ಪಟಾಕಿ ಮಾರಾಟ ನಿಷೇಧ
ಇದೇ ವೇಳೆ ರಾಯಚೂರು ಜಿಲ್ಲೆಯಲ್ಲಿ ಪಟಾಕಿ ಮಾರಾಟ ಹಾಗೂ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ದುರಗೇಶ್ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ದೀಪಾವಳಿ ಹಬ್ಬದ ಸರಳ ಆಚರಣೆ ಕುರಿತಂತೆ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ್ದಾರೆ.
ದೀಪಾವಳಿಯನ್ನು ಪ್ರತಿ ಬಾರಿ ವಿಜೃಂಭಣೆಯಿಂದ ಆಚರಿಸಲಾಗುತಿತ್ತು. ಆದರೆ ಈ ಬಾರಿ ಕೋವಿಡ್-19 ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಅವರ ನಿರ್ದೇಶನದಂತೆ ಜಿಲ್ಲೆಯಲ್ಲಿ ಪಟಾಕಿ ಮಾರಾಟ ಹಾಗೂ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶಿಸಲಾಗಿದೆ.
ಹಬ್ಬ ಆಚರಿಸಲು ಸರ್ಕಾರ ಕೆಲವೊಂದು ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಿಎಸ್‍ಐಆರ್, ಎನ್‍ಇಇಆರ್ ಚಿನ್ಹೆಯುಳ್ಳ ಹಸಿರು ಪಟಾಕಿಗಳನ್ನು ಬಳಸ ಬೇಕು. ಅದನ್ನು ಹೊರತು ಪಡಿಸಿ ಬೇರೆ ಪಟಾಕಿಗಳನ್ನು ಉಪಯೋಗಿಸಬಾರದು. ಈ ದಿಸೆಯಲ್ಲಿ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ಕೋರಿದ್ದಾರೆ.
Comments are closed.