ಭಾರತದ ಪ್ರಮುಖ ದೂರಸಂಪರ್ಕ ಕಂಪನಿಗಳಾದ ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಡಿಸೆಂಬರ್ ಅಂತ್ಯದ ವೇಳೆಗೆ ಇಲ್ಲವೇ ಜನವರಿಯಲ್ಲಿ ಮೊಬೈಲ್ ಸೇವಾ ಶುಲ್ಕದಲ್ಲಿ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂಬ ಮೊಬೈಲ್ ಗ್ರಾಹಕರಿಗೆ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ.
ದೇಶದ ಖಾಸಗಿ ವಲಯದ ಎರಡು ಪ್ರಮುಖ ದೂರಸಂಪರ್ಕ ಸೇವಾ ಕಂಪನಿಗಳಾದ ಭಾರ್ತಿ ಏರ್ಟೆಲ್ ಮತ್ತು ವೊಡಾಪೋನ್ ಐಡಿಯಾ ಲಿಮಿಟೆಡ್‌ಗಳು (ವಿಐಎಲ್) ಡಿಸೆಂಬರ್ ಅಂತ್ಯದ ವೇಳೆಗೆ ಅಥವಾ ಮುಂದಿನ ವರ್ಷದ ಜನವರಿಯಲ್ಲಿ ಮೊಬೈಲ್ ಸೇವಾ ಶುಲ್ಕವನ್ನು ಏರಿಕೆ ಮಾಡುವ ಸಾಧ್ಯತೆ ಇದೆ.
ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಶುಲ್ಕ ಹೆಚ್ಚಳ ಮಾಡುತ್ತಿದ್ದಂತೆ ಜಿಯೋ ಕೂಡ ಶುಲ್ಕ ಹೆಚ್ಚಳ ಮಾಡಲು ಮುಂದಾಗಿದೆ. ‘ಸೇವಾಶುಲ್ಕ ಏರಿಕೆ ಮಾಡಲು ನಾವು ಹಿಂದೇಟು ಹಾಕುವುದಿಲ್ಲ’ ಎಂದು ವಿಐಎಲ್ ಬಹಿರಂಗವಾಗಿಯೇ ಹೇಳಿದೆ. ಆದರೆ ಶುಲ್ಕ ಏರಿಕೆ ಯಾವಾಗ ಆಗಲಿದೆ ಮತ್ತು ಏರಿಕೆ ಪ್ರಮಾಣ ಎಷ್ಟಿರಲಿದೆ ಎಂಬುದನ್ನು ಕಂಪನಿಗಳು ಬಹಿರಂಗಪಡಿಸಿಲ್ಲ.
ಮೊಬೈಲ್ ಸೇವೆ ನೀಡಲು ಅಗತ್ಯವಿರುವ ಪರವಾನಿಗೆ ನೀಡಬೇಕಿದ್ದ ಶುಲ್ಕಕ್ಕೆ ಬದಲಿಗೆ ಕಂಪನಿಗಳು ಆದಾಯದ ಒಂದು ಭಾಗವನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್) ಭಾಗವಾಗಿ ವಿಐಎಲ್ ಮತ್ತು ಏರ್‌ಟೆಲ್ ಸಾವಿರಾರು ಕೋಟಿ ರೂಪಾಯಿಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕಿರುವ ಕಾರಣ ದರ ಏರಿಕೆಯಾಗಲಿದೆ.
ಎಜಿಆರ್ ನಿಯಮ ಜಾರಿಯಾದ ನಂತರ ಎಜಿಆರ್ ಅನ್ವಯವಾಗುವ ಸೇವೆಗಳ ಕುರಿತಾಗಿ ಕಂಪನಿಗಳು ಮತ್ತು ಸರ್ಕಾರದ ಮಧ್ಯೆ ತಕರಾರು ಇತ್ತು. ಸುಪ್ರೀಂ ಕೋರ್ಟ್‌ನಲ್ಲಿ ಸುಮಾರು 10 ವರ್ಷ ವ್ಯಾಜ್ಯ ನಡೆಯಿತು.
ಎಜಿಆರ್ ಹಣವನ್ನು ಕಂಪನಿಗಳು ಪಾವತಿ ಮಾಡಲೇಬೇಕು ಎಂದು ಸುಪ್ರೀಂ ಕೋರ್ಟ್ 2019ರ ಅಕ್ಟೋಬರ್‌ನಲ್ಲಿ ಆದೇಶಿಸಿತು.
ಹತ್ತಕ್ಕೂ ಹೆಚ್ಚು ವರ್ಷಗಳಿಂದ ಬಾಕಿ ಇದ್ದ ಎಜಿಒಆರ್ ಹಣವನ್ನು ಪಾವತಿ ಮಾಡಲು, ಕಂಪನಿಗಳು 2019ರ ಡಿಸೆಂಬರ್‌ನಲ್ಲಿಯೇ ಸೇವಾ ಶುಲ್ಕವನ್ನು ಏರಿಕೆ ಮಾಡಿದ್ದವು. ಈಗ, ಮತ್ತೆ ಏರಿಕೆ ಮಾಡಲು ನಿರ್ಧರಿಸಿವೆ.
ಕಂಪನಿಗಳಿಗೆ ಸಾಲ ಮರುಪಾವತಿ, 5 ಜಿ ತಂತ್ರಜ್ಞಾನ ಅಳವಡಿಕೆ, ಹೊಂದಾಣಿಕೆ ಮಾಡಿದ ಒಟ್ಟು ವರಮಾನದ ಪಾವತಿಗಾಗಿ ಹೆಚ್ಚಿನ ಹಣ ಅಗತ್ಯವಿದ್ದು, ಇದನ್ನು ಭರಿಸಲು ಅನಿವಾರ್ಯವಾಗಿ ಸೇವಾ ಶುಲ್ಕ ಏರಿಕೆ ಮಾಡಲಾಗುವುದು ಎಂದು ಹೇಳಲಾಗಿದೆ.
ಈ ಕಂಪನಿಗಳ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಡಿಸೆಂಬರ್ ಅಂತ್ಯದ ವೇಳೆಗೆ ಶುಲ್ಕ ಏರಿಕೆ ಮಾಡಬಹುದು. ಎಷ್ಟು ಪ್ರಮಾಣದಲ್ಲಿ ಏರಿಕೆ ಮಾಡಬೇಕು ಎಂಬುದನ್ನು ಕಂಪನಿಗಳು ಈಗಾಗಲೇ ನಿರ್ಧರಿಸಿವೆ. ವೊಡಾಫೋನ್ ಐಡಿಯಾ ಮೊದಲು ಶುಲ್ಕ ಏರಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ವೊಡಾಫೋನ್ ಐಡಿಯಾ ಏರಿಕೆ ಮಾಡಿದ ನಂತರ, ಭಾರ್ತಿ ಏರ್‌ಟೆಲ್ ಶುಲ್ಕ ಏರಿಕೆ ಮಾಡುವ ಸಾಧ್ಯತೆ ಇದೆ. ಶುಲ್ಕ ಏರಿಕೆ ಮಾಡುವ ವಿಚಾರದಲ್ಲಿ ಜಿಯೊ ಕಂಪನಿಯು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಶುಲ್ಕ ಏರಿಕೆ ಸಂಬಂಧ ಕಂಪನಿಯು ತನ್ನ ನಿಲುವು ಏನು ಎಂಬುದನ್ನು ಈವರೆಗೆ ಸ್ಪಷ್ಟಪಡಿಸಿಲ್ಲ.
ಆದರೆ, ಸೇವಾ ಶುಲ್ಕ ಏರಿಕೆ ಮಾಡಿದಲ್ಲಿ ಗ್ರಾಹಕರ ಸಂಖ್ಯೆಯಲ್ಲಿ ಇಳಿಕೆಯಾಗುವ ಅಪಾಯ ಕೂಡ ಇದೆ. ಈ ಹಿನ್ನೆಲೆಯಲ್ಲಿ ಡೇಟಾ ದರವನ್ನು ಹೊರೆಯಾಗದಂತೆ ಏರಿಕೆ ಮಾಡಲಾಗುವುದು. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಡೇಟಾ ದರ ಅತ್ಯಂತ ಕಡಿಮೆ ಇದೆ. ಅಮೆರಿಕದಲ್ಲಿ 1 ಜಿಬಿ ಡೇಟಾ 918 ರೂ., ಬ್ರಿಟನ್ ನಲ್ಲಿ 495 ರೂ., ಜಿಂಬಾಬ್ವೆಯಲ್ಲಿ ಸುಮಾರು 5 ಸಾವಿರ ರೂ. ದರ ಇದೆ. ಭಾರತದಲ್ಲಿ 1 ಜಿಬಿ ಡೇಟಾ ದರ 6.68 ರೂಪಾಯಿ ಇದೆ. ಶೀಘ್ರವೇ ದರ ಏರಿಕೆ ಮಾಡಲು ಟೆಲಿಕಾಂ ಕಂಪನಿಗಳು ಮುಂದಾಗಿದೆ ಎನ್ನಲಾಗಿದೆ.
ಈಗ ಕಂಪನಿಗಳು ನೀಡುತ್ತಿರುವ 4ಜಿ ಡೇಟಾ ಪ್ಯಾಕ್‌ನಲ್ಲಿ ಅನಿಯಮಿತ ಕರೆ ಸೌಲಭ್ಯವೂ ದೊರೆಯುತ್ತಿದೆ. ಕರೆ ಸೌಲಭ್ಯಕ್ಕಿಂತ 4ಜಿ ಡೇಟಾ ಬಳಕೆ ಹೆಚ್ಚು ಇದೆ. ಅತ್ಯಂತ ಕಡಿಮೆ ದರದಲ್ಲಿ ಡೇಟಾ ಲಭ್ಯವಿರುವ ಕಾರಣ, ಪ್ರತಿ ಜಿಬಿ ಮೇಲೆ ಕಂಪನಿಗಳು ಗಳಿಸುತ್ತಿರುವ ಆದಾಯ ಅತ್ಯಂತ ಕಡಿಮೆ ಇದೆ. ಹೀಗಾಗಿ ಪ್ರತಿ 1 ಜಿಬಿ ಡೇಟಾಗೆ ಕನಿಷ್ಠ ದರವನ್ನು ವಿಧಿಸಬೇಕು ಎಂದು ಕಂಪನಿಗಳು ಟ್ರಾಯ್‌ಗೆ ಅರ್ಜಿ ಸಲ್ಲಿಸಿವೆ.
ಜಿಯೊ ಕಂಪನಿ ಆರಂಭದಲ್ಲಿ ಉಚಿತ ಮತ್ತು ಅನಿಯಮಿತ ಕರೆ ಘೋಷಿಸಿತು. ಬಹುತೇಕ ಕಂಪನಿಗಳು ಇಕ್ಕಟ್ಟಿಗೆ ಸಿಲುಕಿದ್ದು ಇಲ್ಲಿಯೇ. ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಕಡಿಮೆ ಮೊತ್ತದ ದರಪಟ್ಟಿಗಳನ್ನು ಪ್ರಕಟಿಸಿ ಮಾರುಕಟ್ಟೆಯಲ್ಲಿ ಉಳಿಯುವ ಯತ್ನ ಮಾಡಿದವು.
2016ರಲ್ಲಿ ರಿಲಯನ್ಸ್ ಜಿಯೊ ಕಂಪನಿಯು ಅಡಿಯಿಟ್ಟಾಗ ದೇಶ ದಲ್ಲಿ ಎಂಟು ಕಂಪನಿಗಳು ಅಸ್ತಿತ್ವದಲ್ಲಿದ್ದವು. ಈಗ ಅವುಗಳ ಸಂಖ್ಯೆ ಕೇವಲ ನಾಲ್ಕು. ಈ ಪೈಕಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಹಾಗೂ ವೊಡಾಫೋನ್ ಐಡಿಯಾ ಕಂಪನಿಗಳ ಸ್ಥಿತಿ ಡೋಲಾಯಮಾನವಾಗಿದೆ. ಹೀಗಾಗಿ ಜಿಯೊ ಮತ್ತು ಏರ್‌ಟೆಲ್ ಮಾತ್ರ ಟೆಲಿಕಾಂ ವಲಯವನ್ನು ಆಳುತ್ತಿರುವುದು ಸ್ಪಷ್ಟವಾಗುತ್ತಿದೆ.
Comments are closed.