ಪ್ರಮುಖ ವರದಿಗಳು

ರಾಷ್ಟ್ರ ರಾಜಧಾನಿಯಲ್ಲಿ ಹದಗೆಡುತ್ತಿರುವ ವಾಯು ಮಾಲಿನ್ಯ: ದೆಹಲಿ ತೊರೆಯಲು ಸೋನಿಯಾ ಗಾಂಧಿ ಸಿದ್ಧತೆ

Pinterest LinkedIn Tumblr

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪರಿಸರ ಮಾಲಿನ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಸಾಕಷ್ಟು ಸುರಕ್ಷಾ ಕ್ರಮಗಳ ಬಳಿಕವೂ ವಾಯು ಮಾಲಿನ್ಯ ಪ್ರಮಾಣ ಕಡಿಮೆಯಾದಂತೆ ಕಾಣುತ್ತಿಲ್ಲ.

ವಾಯು ಗುಣಮಟ್ಟದ ಇಂಡೆಕ್ಸ್​ನಲ್ಲಿ ಸಿರಿಫೋರ್ಟ್​ 287 (ಕಳಪೆ), ಶ್ರೀ ಅರಬಿಂದೋ ಮಾರ್ಗ್ 291(ಕಳಪೆ) ಹಾಗೂ ಆರ್ಕೆ ಪುರಂ 302 (ಅತ್ಯಂತ ಕಳಪೆ) ಗುಣಮಟ್ಟ ದಾಖಲಿಸಿದೆ ಅಂತಾ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ವಾಯು ಗುಣಮಟ್ಟ 0-50 ಇದ್ದರೆ ಅದನ್ನ ಉತ್ತಮ, 51-100 ಇದ್ದರೆ ಸಾಮಾನ್ಯ, 101 -200 ಇದ್ದರೆ ಮಧ್ಯಮ, 201 -300 ಇದ್ದರೆ ಕಳಪೆ ಹಾಗೂ 301-400 ಇದ್ದರೆ ಅತ್ಯಂತ ಕಳಪೆ ಮತ್ತು 401-500ನ್ನು ವಿಕೋಪ ಎಂದು ಪರಿಗಣಿಸಲಾಗುತಿದೆ.

ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಪ್ರಮಾಣದ ವಾಯುಮಾಲಿನ್ಯವಿರುವ ಕಾರಣ ಅನಾರೋಗ್ಯ ಪೀಡಿತರ ಆರೋಗ್ಯದ ಮೇಲೆ ಅದು ಪ್ರತಿಕೂಲ ಪರಿಣಾಮ ಉಂಟುಮಾಡಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ದೀರ್ಘಕಾಲದ ಎದೆಯ ಸೋಂಕಿನಿಂದ ಬಳಲುತ್ತಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೆಲ ದಿನಗಳ ಮಟ್ಟಿಗೆ ಹೊರಭಾಗದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಕಳೆದ ಹಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿರುವ ಸೋನಿಯಾ ಗಾಂಧಿಗೆ ಉಸಿರಾಟದ ತೊಂದರೆಯಿದೆ. ದೆಹಲಿಯಲ್ಲಿ ವಾಯುಮಾಲಿನ್ಯ ಹದಗೆಟ್ಟಿರುವ ಕಾರಣ ಆರೋಗ್ಯದ ಮೇಲೆ ಪರಿಣಾಮ ಬೀರಬಹುದೆಂಬ ಹಿನ್ನೆಲೆಯಲ್ಲಿ ದೆಹಲಿಯಿಂದ ಹೊರಭಾಗದಲ್ಲಿ ಇರುವುದು ಸೂಕ್ತ ಎಂದು ಪಕ್ಷದ ಅನೇಕ ನಾಯಕರು ಸಲಹೆ ನೀಡಿದ್ದರು.

ಇದೇ ವೇಳೆ ವೈದ್ಯರು ಹಾಗೂ ಕುಟುಂಬ ಸದಸ್ಯರ ಸಲಹೆ ಮೇರೆಗೆ ಇಂದು ಸಂಜೆಯೊಳಗೆ ಸೋನಿಯಾ ಗಾಂಧಿ ಅವರು ಗೋವಾ ಅಥವಾ ಚೆನ್ನೈನಲ್ಲಿ ತಂಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಸೋನಿಯಾ ಗಾಂಧಿ ಜೊತೆ ಪುತ್ರ ರಾಹುಲ್ ಗಾಂಧಿ ಅಥವಾ ಪ್ರಿಯಾಂಕ ಗಾಂಧಿ ವಾದ್ರಾ ತೆರಳುವ ಸಂಭವವಿದೆ.

ಕಳೆದ ಆಗಸ್ಟ್ ನಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಸೋನಿಯಾ ಗಾಂಧಿ ನಿಯಮಿತವಾದ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ ಅವರಿಗೆ ಎದೆಯ ಸೋಂಕು ಹಾಗೆಯೇ ಇದ್ದು ಈ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ, ಸೋಂಕು ಕಡಿಮೆಯಾಗಿಲ್ಲದೆ ಇರಲು ದೆಹಲಿಯಲ್ಲಿನ ವಾಯುಮಾಲಿನ್ಯ ಕಾರಣವೆಂದು ಮೂಲಗಳು ಉಲ್ಲೇಖಿಸಿದೆ.

Comments are closed.