ಕರಾವಳಿ

ಉಗ್ರರ ಪರ ಗೋಡೆ ಬರಹ ಪ್ರಕರಣ : ತೀರ್ಥಹಳ್ಳಿಯಲ್ಲಿ ಮತ್ತೋರ್ವ ಆರೋಪಿ ಸೆರೆ

Pinterest LinkedIn Tumblr

ಮಂಗಳೂರು, ಡಿಸೆಂಬರ್. 09: ಮಂಗಳೂರಿನ ಪ್ರತ್ಯೇಕ ಸ್ಥಳಗಳಲ್ಲಿ ಉಗ್ರರ ಪರ ಪ್ರಚೋದನಕಾರಿ ಗೋಡೆ ಬರಹ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇದೀಗ ಪ್ರಕರಣಕ್ಕೆ ಸಂಬಂಧಿಸಿ ಮೂರನೇ ಆರೋಪಿಯನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.

ಇತ್ತೀಚೆಗೆ ಬಿಜೈನ ಅಪಾರ್ಟ್‌ಮೆಂಟ್‌ನ ಗೋಡೆಯಲ್ಲಿ ಹಾಗೂ ನಗರದ ಕೋರ್ಟ್ ರೋಡ್‌ನಲ್ಲಿ ಕೋರ್ಟ್‌ಗೆ ಸಮೀಪವಾಗಿರುವ ಕೋರ್ಟ್ ಪ್ರಿಮಿಸಸ್‌ನ ಹಳೇ ಪೊಲೀಸ್ ಔಟ್ ಪೋಸ್ಟ್‌ನ ಗೋಡೆಯ ಮೇಲೆ ಉಗ್ರರ ಪರ ಪ್ರಚೋದನಕಾರಿ ಬರಹಗಳಿಗೆ ಸಂಬಂಧಿಸಿದಂತೆ ಮೂರನೇ ಆರೋಪಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಶೋಧ ಕಾರ್ಯ ನಡೆಸಿದ ಮಂಗಳೂರು ಪೊಲೀಸರು ಮೂರನೇ ಆರೋಪಿಯನ್ನು ಮಂಗಳವಾರ ತೀರ್ಥಹಳ್ಳಿಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ತೀರ್ಥಹಳ್ಳಿಯ ಸಾದತ್ ಎಂಬಾತ ಪೊಲೀಸ್ ವಶದಲ್ಲಿರುವ ಆರೋಪಿಯಾಗಿದ್ದು, ಈತ ಪ್ರಕರಣದ ಮೊದಲ ಆರೋಪಿ ಮುಹಮ್ಮದ್ ಶಾರೀಕ್‌ನ ಸಂಬಂಧಿ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮೊಹಮ್ಮದ್ ಶಾರೀಕ್ (22) ಮತ್ತು ಮಾಝ್ ಮುನೀರ್ ಅಹಮ್ಮದ್ (21) ಅವರನ್ನು ಈಗಾಗಲೇ ಬಂಧಿಸಿದ್ದು, ಮೂರನೇ ಆರೋಪಿ ಸಾದತ್, ಶಾರೀಕ್‌ನ ಚಿಕ್ಕಪ್ಪ ಎಂದು ಹೇಳಲಾಗುತ್ತಿದೆ.

ಸಾದತ್ ಈ ಕೃತ್ಯ ಎಸಗಲು ಶಾರಿಕ್‌ಗೆ ಉತ್ತೇಜನ ನೀಡಿದ ಎನ್ನಲಾಗಿದೆ. ಆತ ಕೂಡ ತೀರ್ಥಹಳ್ಳಿಯಲ್ಲಿ ಮಳಿಗೆ ವ್ಯಾಪಾರ ಮತ್ತು ಬಟ್ಟೆಗಳನ್ನು ಮಾರಾಟ ಮಾಡಲು ಮನೆ ಮನೆಗೆ ತೆರಳುತ್ತಿದ್ದ ಎಂದು ವಿಚಾರಣೆಯಿಂದ ತಿಳಿದು ಬಂದಿದೆ ಎನ್ನಲಾಗಿದೆ..

ಇನ್ನುನ್ಯಾಯಾಲಯದ ಆದೇಶದಂತೆ, ಬಂಧಿತ ಆರೋಪಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು ಇಬ್ಬರಿಗೂ ನೆಗೆಟಿವ್ ವರದಿ ಬಂದಿದೆ. ಆದ್ದರಿಂದ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸರು ಮತ್ತೆ ತಮ್ಮ ಕಸ್ಟಡಿಗೆ ಪಡೆದಿದ್ದಾರೆ.

ಘಟನೆ ವಿವರ :

ನ.27ರಂದು ನಗರದ ಬಿಜೈ ಮತ್ತು ಕೋರ್ಟ್ ಸಮೀಪ ಕೆಲದಿನಗಳ ಹಿಂದೆ ಕಂಡು ಬಂದ ಉಗ್ರರನ್ನು ಬೆಂಬಲಿಸಿ ಬರೆದ ಗೋಡೆ ಬರಹ ಕಂಡು ಬಂದಿತ್ತು. ಕದ್ರಿ‌ ಪೊಲೀಸ್ ಠಾಣೆ ಸಮೀಪದ ಬಿಜೈ ಬಳಿಯ ರಸ್ತೆಯ ಗೋಡೆಯೊಂದರಲ್ಲಿ “ನಮ್ಮನ್ನು ವಿದ್ವಂಸಕ ಕೃತ್ಯ ನಡೆಸಲು ಉತ್ತೇಜಿಸಲು ಬರಬೇಡಿ, ಲಷ್ಕರ್ ಇ ತೊಯಿಬಾ ಮತ್ತು ತಾಲಿಬಾನ್ ಗಳಿಗೆ ಸಂಘಿಗಳನ್ನು ಯಾವ ರೀತಿ ನೋಡಿಕೊಳ್ಳಬೇಕು ಎನ್ನುವುದು ತಿಳಿದಿದೆ.” ಅಲ್ಲದೆ ‘ಲಷ್ಕರ್ ಝಿಂದಾಬಾದ್’ ಎಂದು ಬರೆಯಲಾಗಿತ್ತು.

“Do not force us to invite Lashkar-e-Toiba and Taliban to Deal with Sanghis and Manvedis” ಎಂದು ಉಗ್ರರ ಪರವಾಗಿ ಕಿಡಿಗೇಡಿಗಳು ಬರೆದಿದ್ದರು. ಅಷ್ಟೇ ಅಲ್ಲದೇ ಹ್ಯಾಷ್ ಟ್ಯಾಗ್ ಹಾಕಿ, “ಲಷ್ಕರ್‌‌ ಜಿಂದಾಬಾದ್”‌‌‌‌‌ ಎಂದು ಬರೆಯಲಾಗಿತ್ತು. ಬಳಿಕ ಕದ್ರಿ ಪೊಲೀಸರು ವಿವಾದಿತ ಬರಹದ ಮೇಲೆ ಪೈಂಟ್‌ ಬಳಿದು ಅದನ್ನು ಅಳಿಸಿ ಹಾಕಿದ್ದಾರೆ.

ಬಳಿಕ ನ.29ರಂದು ನಗರದ ಪಿವಿಎಸ್ ಸಮೀಪದ ನ್ಯಾಯಾಲಯದ ಆವರಣದ ಹಳೆ ಕಟ್ಟಡದ ಗೋಡೆಯ ಮೇಲೆ “Gustak e rasool ek hi saza tan say juda” ಎಂದು ಬರಹ ಪ್ರತ್ಯಕ್ಷವಾಗಿತ್ತು.

ನಗರದ ಕೋರ್ಟ್ ರೋಡ್‌ನಲ್ಲಿ ಕೋರ್ಟ್‌ಗೆ ಸಮೀಪವಾಗಿರುವ ಕೋರ್ಟ್ ಪ್ರಿಮಿಸಸ್‌ನ ಹಳೇ ಪೊಲೀಸ್ ಔಟ್ ಪೋಸ್ಟ್‌ನ ಗೋಡೆಯ ಮೇಲೆ ಕಿಡಿಗೇಡಿಗಳು ಉರ್ದು ಭಾಷೆಯಲ್ಲಿ ‘Gustuk e Rasool ek hi saza sar tan say juda’ ಅಂದರೆ, “ಪ್ರವಾದಿಗೆ ಕೋಪ ಬಂದರೆ ಒಂದೇ ಶಿಕ್ಷೆ, ಅದು ತಲೆ ದೇಹದಿಂದ ಬೇರ್ಪಡುವುದು” ಎಂಬ ವಿವಾದಾತ್ಮಕ ಬರಹವನ್ನು ಬರೆದಿದ್ದಾರೆ. ಕಪ್ಪು ಬಣ್ಣದ ಪೈಂಟ್ ಬಳಸಿ ರಾತ್ರಿ ವೇಳೆ ಬರೆಯಲಾಗಿದ್ದು, ಮರುದಿನ ಬೆಳಗ್ಗೆ ವಿಷಯ ಬೆಳಕಿಗೆ ಬಂದಿದೆ.

Comments are closed.