(ಕಡತ ಚಿತ್ರ)
ಬೆಂಗಳೂರು, ಡಿಸೆಂಬರ್.23: ನಾಳೆಯಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಕೋವಿಡ್ ಸೋಂಕಿನ ರೂಪಾಂತರ ಹಾವಳಿ ಭೀತಿ ಹೆಚ್ಚಾಗಿರುವುದರಿಂದ ಇಂದಿನಿಂದ 9 ದಿನಗಳ ಕಾಲ ಪ್ರತಿದಿನ ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಈ ನೈಟ್ ಕರ್ಪ್ಯೂ ಜಾರಿಯಲ್ಲಿರುತ್ತದೆ. ಈ ಸಮಯದಲ್ಲಿ ವ್ಯಾಪಾರ-ವಹಿವಾಟುಗಳು ಬಂದ್ ಆಗಿರುತ್ತವೆ ಎಂದು ಸಿಎಂ ತಿಳಿಸಿದ್ದಾರೆ.
ಮಧ್ಯಾಹ್ನ ಪ್ರತಿದಿನ ರಾತ್ರಿ 10ರಿಂದ ಬೆಳಗ್ಗೆ 6 ರವರೆಗೆ ಈ ನೈಟ್ ಕರ್ಪ್ಯೂ ಜಾರಿಯಲ್ಲಿರುತ್ತದೆ ಎಂದು ಸಿಎಂ ತಿಳಿಸಿದ್ದರು. ಆದರೆ ಸಾಯಂಕಾಲ ದಿನಾಂಕ ಹಾಗೂ ಸಮಯವನ್ನು ಬದಲಾವಣೆ ಮಾಡಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ, ”ಕರ್ನಾಟಕ ರಾಜ್ಯದಲ್ಲಿ ಇಂದಿನಿಂದ ಜಾರಿ ಮಾಡಲು ಉದ್ದೇಶಿಸಿದ್ದ ರಾತ್ರಿ ಕರ್ಫ್ಯೂ ಬದಲಾಗಿ ನಾಳೆ, ಅಂದರೆ ದಿನಾಂಕ 24.12.2020 ರಿಂದ ಜನವರಿ 01, 2021 ರವರೆಗೆ, ರಾತ್ರಿ 11:00 ಗಂಟೆಯಿಂದ ಬೆಳಗ್ಗೆ 5:00 ಗಂಟೆಯವರೆಗೆ (ದಿನಾಂಕ 02.01.2021ರ ಬೆಳಗ್ಗೆ 5:00 ಗಂಟೆ) ಜಾರಿಯಲ್ಲಿರುತ್ತದೆ” ಎಂದು ತಿಳಿಸಿದ್ದಾರೆ.
ರೂಪಾಂತರಗೊಂಡಿರುವಂತಹ ಕೊರೋನ ವೈರಾಣು ಕಂಡು ಬಂದಿರುವ ಹಿನ್ನೆಲೆಯಲ್ಲಿ ಡಿ.24ರ ರಾತ್ರಿ 11 ಗಂಟೆಯಿಂದ ಜನವರಿ 2ರ ಬೆಳಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿ ಮಾಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ ಡಿ.24ರ ರಾತ್ರಿ ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ನಡೆಯಲಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು(ಮಿಡ್ ನೈಟ್ ಮಾಸ್) ಯಾವುದೆ ಅಡಚಣೆಯಿಲ್ಲದೆ ಮಾಡಬಹುದು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.
ಸಮಯ ಬದಲಾವಣೆ ಮಾಡಿದ ಸಿಎಂ :
ಇಂದು ಮಧ್ಯಾಹ್ನ ಡಿ.23 ರಿಂದ ಜನವರಿ 2ರವರೆಗೆ 9 ದಿನಗಳ ಕಾಲ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ವಿಧಿಸಲು ನಿರ್ಧರಿಸಲಾಗಿತ್ತು. ಆದರೆ, ವಿವಿಧ ಸಮುದಾಯದ ಮುಖಂಡರು, ಎಫ್‍ಕೆಸಿಸಿಐ ಪದಾಧಿಕಾರಿಗಳು, ಹೊಟೇಲ್ ಹಾಗೂ ಬಾರ್ ಮಾಲಕರು ಸೇರಿದಂತೆ ವಿವಿಧ ವರ್ತಕರ ಸಂಘಗಳ ಮನವಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ರಾತ್ರಿ ಕರ್ಫ್ಯೂ ಅವಧಿಯನ್ನು ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆಯವರೆಗೆ ವಿಧಿಸಲು ತೀರ್ಮಾನಿಸಿದ್ದಾರೆ.
ಜನರ ಆರೋಗ್ಯದ ದೃಷ್ಟಿಯಿಂದ ರಾತ್ರಿ ಕರ್ಫ್ಯೂವನ್ನು ವಿಧಿಸಲಾಗುತ್ತಿದೆ. ಆದುದರಿಂದ, ಎಲ್ಲರೂ ಸಹಕಾರ ನೀಡಬೇಕು. ಆಸ್ಪತ್ರೆ ಸೇರಿದಂತೆ ತುರ್ತು ಸೇವೆಗಳಿಗೆ ಯಾವುದೆ ತೊಂದರೆಯಾಗುವುದಿಲ್ಲ. ಈ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು. ಶಾಲಾ, ಕಾಲೇಜುಗಳನ್ನು ಜ.1ರಿಂದ ತೆರೆಯುವ ಸಂಬಂಧ ಈಗಾಗಲೆ ಚರ್ಚೆ ಮಾಡಿ ನಿರ್ಧರಿಸಿದ್ದೇವೆ. ಇನ್ನೆರಡು ದಿನಗಳಲ್ಲಿ ಪರಿಸ್ಥಿತಿ ನೋಡಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.
ರಾತ್ರಿ ಕರ್ಫ್ಯೂ ಅವಧಿಯಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬೇರೆಯಾವುದೆ ಬಗೆಯ ಚಟುವಟಿಕೆಗಳಿಗೆ ಅವಕಾಶವಿಲ್ಲ. ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ಯಾವುದೆ ನಿರ್ಬಂಧವಿಲ್ಲ. ರಾತ್ರಿ ವೇಳೆಯಲ್ಲಿ ಕಾರ್ಯಚರಿಸುವಂತಹ ಕೈಗಾರಿಕೆಗಳು, ಕಂಪೆನಿಗಳು ಹಾಗೂ ಸಂಸ್ಥೆಗಳು ಅಗತ್ಯವಿರುವ ಸಿಬ್ಬಂದಿ ಪೈಕಿ ಶೇ.50ರಷ್ಟು ಸಿಬ್ಬಂದಿಯನ್ನು ಬಳಸಿಕೊಳ್ಳಬಹುದು. ಸಂಸ್ಥೆಗಳಿಂದ ನೀಡಲಾಗುವ ಗುರುತಿನ ಚೀಟಿಯನ್ನು ಪ್ರದರ್ಶಿಸಿ ಸಿಬ್ಬಂದಿಗಳು ಸಂಚರಿಸಬಹುದು. ದಿನದ 24 ಗಂಟೆ ಕಾರ್ಯನಿರ್ವಹಿಸುವ ಸಂಸ್ಥೆಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ತಿಳಿಸಿದ್ದಾರೆ.
ಕರ್ಫ್ಯೂ ಅವಧಿಯಲ್ಲಿ ಹೋಟೆಲ್ ರೆಸ್ಟೋರೆಂಟ್ ಅಂಗಡಿಗಳು ಸೇರಿದಂತೆ ರಾಜ್ಯ ವ್ಯಾಪಿ ಎಲ್ಲಾ ಅಂಗಡಿಗಳು, ವ್ಯಾಪಾರ-ವಹಿವಾಟು ಬಂದ್ ಇರಲಿವೆ. ಹೊಸವರ್ಷಾಚರಣೆ ಬಂದ್. ಪಾರ್ಟಿ ಮಾಡುವಂತಿಲ್ಲ ಬಾರ್ ಮತ್ತು ರೆಸ್ಟೋರೆಂಟ್ ತೆರೆಯುವಂತಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.
Comments are closed.