ಕುಂದಾಪುರ: ಮನೆಯ ಗಾರೆ ಕೆಲಸಕ್ಕೆಂದು ಬಂದ ವ್ಯಕ್ತಿಯೋರ್ವ ಆ ಮನೆಯ ಯುವತಿಯನ್ನು ಪ್ರೀತಿಸುವ ನೆಪದಲ್ಲಿ ಒಂದಷ್ಟು ವರ್ಷ ಅವಳೊಂದಿಗೆ ಸುತ್ತಿ ಒಮ್ಮೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಕ್ರಮ ಪ್ರವೇಶ ಮಾಡಿ ಅತ್ಯಾಚಾರ ನಡೆಸಿ ಬಳಿಕ ಮದುವೆಗೆ ಒಲ್ಲೆ ಎಂದು ಮೋಸ ಮಾಡಿದ ಆರೋಪ ಹೊತ್ತಿದ್ದ ಪ್ರಕರಣದಲ್ಲಿ ಆತನ ಹೊರಿಸಲಾದ ಎಲ್ಲಾ ದೋಷಾರೋಪಣೆಗಳು ರುಜುವಾತಾಗಿದೆಯೆಂದು ಕುಂದಾಪುರದಲ್ಲಿರುವ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನರಹರಿ ಪ್ರಭಾಕರ್ ಮರಾಠೆ ಆದೇಶಿಸಿದ್ದಾರೆ.
ಆರ್ಡಿ ಸಮೀಪದ ಕೊಂಜಾಡಿ ನಿವಾಸಿ ಪ್ರದೀಪ್ ನಾಯ್ಕ್ (36) ಮೇಲಿನ ಆರೋಪಣೆಗಳು ರುಜುವಾತಾಗಿದ್ದು ಅಪರಾಧಿಗೆ ಶಿಕ್ಷೆ ಪ್ರಮಾಣದಲ್ಲಿ ವಾದ-ವಿವಾದ ಆಲಿಸಿದ ನ್ಯಾಯಾಧೀಶರು ಜ.29 ಶುಕ್ರವಾರ ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ತೀರ್ಪು ನೀಡಿದ್ದಾರೆ.
2005ನೇ ಇಸವಿಯಲ್ಲಿ ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಅಲ್ಬಾಡಿ ಗ್ರಾಮದಲ್ಲಿ ತಮ್ಮ ಹೊಸ ಮನೆ ಕಟ್ಟುವ ವೇಳೆ ಗಾರೆ ಕೆಲಸಕ್ಕೆಂದು ಬಂದ ಪ್ರದೀಪ್ ಆ ಮನೆಯ ಯುವತಿಯನ್ನು ಪುಸಲಾಯಿಸಿ ಸ್ನೇಹ ಬೆಳೆಸದ್ದು ಬಳಿಕ ಮದುವೆಯಾಗುವುದಾಗಿ ನಂಬಿಸಿದ್ದು ಮನೆಗೆ ಅಕ್ರಮ ಪ್ರವೇಶ ಮಾಡಿ ಅತ್ಯಾಚಾರ ನಡೆಸಿದ್ದ. ನಂತರ ಮದುವೆ ವಿಚಾರ ಪ್ರಸ್ತಾಪಿಸಿದಾಗ ಸಹೋದರಿ ಮದುವೆಯಾದ ಬಳಿಕ ಮದುವೆಯಾಗುವ ಭರವಸೆ ನೀಡಿದ್ದು ಯುವತಿಯೂ ನಂಬಿದ್ದಳು. ಆದರೆ 2015 ರಲ್ಲಿ ಮತ್ತೆ ಯುವತಿ ಮದುವೆಯಾವುವಂತೆ ತಿಳಿಸಿದಾಗ ಆತ ಮದುವೆ ನಿರಾಕರಿಸಿದ್ದ. ತರುವಾಯ ಸಂತ್ರಸ್ತ ಯುವತಿ ಶಂಕರನಾರಾಯಣ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ವಿರುದ್ಧ ಅಕ್ರಮ ಮನೆ ಪ್ರವೇಶ, ಅತ್ಯಾಚಾರ ಹಾಗೂ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು. ಅಂದಿನ ಕುಂದಾಪುರ ಸಿಪಿಐ ದಿವಾಕರ ಪಿಎಂ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸಂತ್ರಸ್ತ ಯುವತಿ ಹಾಗೂ ಆಕೆ ಪಾಲಕರು ಸೇರಿ ಒಟ್ಟು 9 ಮಂದಿ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದರು. ಸಂತ್ರಸ್ತೆ ಸಾಕ್ಷ್ಯ ಹಾಗೂ ವೈದ್ಯಕೀಯ ವರದಿ ಸೇರಿದದಂತೆ ಸುಧೀರ್ಘ ವಾದ ವಿವಾದ ಆಲಿಸಿದ ನ್ಯಾಯಾಲಯವು ಅಪರಾಧಿ ಎಂದು ತೀರ್ಪು ನೀಡಿದೆ.
ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ವಾದಿಸಿದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.