ಮಂಗಳೂರು / ಬೆಳ್ತಂಗಡಿ : ಸರಕಾರಿ ಕೆಲಸದಲ್ಲಿರುವ ಮಗ ಸಹಿತಾ ಐದು ಮಕ್ಕಳಿದ್ದರೂ ವಯೋ ವೃದ್ಧ ತಾಯಿಯನ್ನು ಮನೆ ಮಂದಿ ರಸ್ತೆಯಲ್ಲೇ ಬಿಟ್ಟು ಹೋಗಿರುವ ಮನಕಲುಕುವ ಘಟನೆ ದ.ಕ.ಜಿಲ್ಲೆಯ ಬೆಳ್ತಂಗಡಿಯ ಕಳಿಯದ ನಾಳ ಎಂಬಲ್ಲಿ ನಡೆದಿದೆ.
ಈ ವೃದ್ಧೆಗೆ 5 ಮಕ್ಕಳಿದ್ದು, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ. ವಿಪರ್ಯಾಸವೆಂದರೆ, ಈ ವೃದ್ಧೆ ತಾಯಿಯ ಮಕ್ಕಳ ಪೈಕಿ ಒಬ್ಬರು ಆಶಾ ಕಾರ್ಯಕರ್ತೆಯಾಗಿದ್ದು, ಒಬ್ಬ ಪುತ್ರ ಮಂಗಳೂರಿನಲ್ಲಿ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನಿಬ್ಬರು ಪುತ್ರರು ಮೇಸ್ತ್ರಿ ಕೆಲಸ ಮಾಡುತ್ತಿದ್ದಾರೆ. ಪುತ್ರಿಯರಲ್ಲಿ ಒಬ್ಬರು ಗೃಹಿಣಿಯಾಗಿದ್ದಾರೆ.
ವೃದ್ಧೆಯನ್ನು ಬಿಟ್ಟು ಹೋಗಿರುವ ಬಗ್ಗೆ ದ.ಕ ಜಿಲ್ಲಾ 112 ಸಹಾಯವಾಣಿಗೆ ಕರೆ ಬಂದಿದ್ದು, ತಕ್ಷಣ ತುರ್ತು ಸ್ಪಂದನ ವಾಹನ ಸ್ಥಳಕ್ಕೆ ತೆರಳಿ ವೃದ್ಧೆಯನ್ನು ರಕ್ಷಿಸಿದೆ. ಮನೆಯವರಿಗೆ ಸೂಕ್ತ ಮಾಹಿತಿ ನೀಡಿ ವೃದ್ಧೆಯನ್ನು ಅವರ ಪುತ್ರಿಯ ಮನೆಗೆ ಕಳುಹಿಸಲಾಗಿದೆ. ವೃದ್ಧೆಯ ಮಕ್ಕಳ ಅಮಾನವೀಯ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಮನೆಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಬೆಳ್ತಂಗಡಿ ಠಾಣೆಗೆ ಹಸ್ತಾಂತರಿಸಲಾಗಿದೆ.
Comments are closed.