ಕರಾವಳಿ

ತಂಬಾಕು ವ್ಯಸನಿಗಳಿಗೆ ಮಾತ್ರವಲ್ಲ ಅವರ ಜತೆಗಿರುವವರಿಗೂ ಅಪಾಯ ಖಂಡಿತ : ಡಾ. ಸೆಲ್ವಮಣಿ

Pinterest LinkedIn Tumblr
ಮಂಗಳೂರು, ಫೆಬ್ರವರಿ.09:: ಧೂಮಪಾನ ಸೇದುವವರ ಆರೋಗ್ಯದ ಮೇಲಷ್ಟೆ ದುಷ್ಪರಿಣಾಮ ಬೀರುವುದಲ್ಲದೆ, ಅವರ ಜತೆಗಿರುವವರಿಗೂ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಕಾರಣ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇರಿದಂತೆ ತಂಬಾಕು ಉತ್ಪನ್ನಗಳ ಸೇವನೆ ಬಗ್ಗೆ ಪ್ರತಿಯೊಬ್ಬರೂ ತಮ್ಮ ಜವಾಬ್ಧಾರಿಯನ್ನು ಪ್ರದರ್ಶಿಸಬೇಕು ಎಂದು ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆರ್.  ಸೆಲ್ವಮಣಿ ಅಭಿಪ್ರಾಯಿಸಿದರು.
ನಗರದ ಪ್ರೆಸ್‍ಕ್ಲಬ್‍ನಲ್ಲಿ ಇಂದು ಪತ್ರಕರ್ತರಿಗಾಗಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಮತ್ತು ಕೋಟ್ಪಾ ಕಾಯ್ದೆ 2003ರ ಬಗ್ಗೆ ತರಬೇತಿ ಮತ್ತು ಸಾಮಥ್ರ್ಯ ಅಭಿವೃದ್ಧಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ  ತಂಬಾಕು ದುಷ್ಪರಿಣಾಮದ ಕುರಿತು ಪೋಸ್ಟರ್ ಅನಾವರಣಗೊಳಿಸಿ ಮಾತನಾಡಿದರು.
ಈ ತಂಬಾಕು, ಧೂಮಪಾನ ಚಟ ಹೊಂದಿರುವವರಲ್ಲಿ ಹೃದಯ ಸಂಬಂಧಿ, ಕರುಳಿನ ಹಾಗೂ ಕ್ಯಾನ್ಸರ್‍ನಂತಹ ಮಾರಕ ರೋಗಗಳಿಗೂ ಕಾರಣವಾಗುತ್ತದೆ. ಕತಲೆಗೂದಲು ಉದುರುವುದು, ವಯಸ್ಸಾದಂತೆ ಕಾಣುವುದು, ಹಲ್ಲುಗಳು ಸಡಿಲವಾಗುವುದು, ಉಬ್ಬಸ, ಉಸಿರಿನ ದುರ್ವಾಸನೆಯೂ ಕಂಡು ಬರುತ್ತದೆ.  ಧೂಮಪಾನಿಗಳ ಮಕ್ಕಳಲ್ಲಿ ಸೀಳು ತುಟಿಯ ಸಮಸ್ಯೆ, ಕಡಿಮೆ ತೂಕದ ಮಗು ಜನನ ಮೊದಲಾದ ಸಮಸ್ಯೆಗಳೂ ಕಂಡು ಬರುತ್ತದೆ ಎಂದು ಕ್ಷೇಮಾದ  ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಡಾ. ಜಗ್ನನಾಥ್ ವಿವರಿಸಿದರು.
ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಗದೀಶ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಎನ್‍ಟಿಸಿಪಿ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ಹನುಮಂತರಾಯಪ್ಪ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ ಉಪಸ್ಥಿತರಿದ್ದರು. ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು.
ದ.ಕ. ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ  ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ತಂಬಾಕಿನಲ್ಲಿದೆ 4000 ರಾಸಾಯನಿಕಗಳು!
ತಂಬಾಕಿನಲ್ಲಿ 4000 ಬಗೆಯ ರಾಸಾಯನಿಕಗಳಿದ್ದು, ಇವುಗಳಲ್ಲಿ 60 ರಾಸಾಯನಿಕಗಳು ಕ್ಯಾನ್ಸರ್‍ಕಾರಕ.ಕೀಟನಾಶಕವಾಗಿ ಉಪಯೋಗಿಸಲಾಗುವ ತಂಬಾಕು ಎಲೆಯನ್ನು ಟಾಯ್ಲೆಟ್ ಕ್ಲೀನರ್‍ಗೂ ಬಳಕೆ ಮಾಡಲಾಗುತ್ತದೆ.
ತಂಬಾಕಿನಲ್ಲಿರುವ ನಿಕೋಟಿನ್ (ಧೂಮಪಾನ ಅಥವಾ ಗುಟ್ಕಾ ಮೊದಲಾದ ತಂಬಾಕು ಉತ್ಪನಗಳ ರೂಪದಲ್ಲಿ )ಎಂಬ ರಾಸಾಯನಿಕ ಸೇವನೆಯ 10 ಸೆಕೆಂಡ್‍ಗಳಲ್ಲಿಯೇ ಮೆದುಳಿಗೆ ತಲುಪಿ ಬಳಕೆ ಮಾಡುವವರಲ್ಲಿ ಚಟವನ್ನಾಗಿಸುತ್ತದೆ.
ಇದು ಡ್ರಗ್ಸ್‍ಗೆ ಸಮಾನ ಮಾತ್ರವಲ್ಲದೆ, ಆರೋಗ್ಯದ ವಿಷಯದಲ್ಲಿ ಅತ್ಯಂತ ಅಪಾಯಕಾರಿ. ಆದರೆ ಧೂಮಪಾನ, ತಂಬಾಕು ಸೇವನೆ ಕಾನೂನು ಸಮ್ಮತವಾಗರುವುದರಿಂದ ಜನರು ಇದರ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ — ಡಾ. ಜಗನ್ನಾಥ್, ಮುಖ್ಯಸ್ಥರು, ಸಮುದಾಯ ಆರೋಗ್ಯ ವಿಭಾಗ, ಕ್ಷೇಮ.

Comments are closed.