ಮಂಗಳೂರು, ಫೆಬ್ರವರಿ.10: ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ (ಡಿಎಲ್‌ಎಸ್‌ಎ) ದ ಮಧ್ಯಪ್ರವೇಶ ಹಾಗೂ ಪಾಲಿಕೆ ಅಧಿಕಾರಿಗಳ ಮೇಲೆ ಒತ್ತಡ ಹೇರಿದ ಪರಿಣಾಮ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಪಚ್ಚನಾಡಿ ಸಂತ್ರಸ್ತರ ಪರಿಹಾರದ ಕನಸು ಇದೀಗ ನನಸಾಗುತ್ತಿದೆ.
ಫೆಬ್ರವರಿ 15ರೊಳಗೆ ಮಧ್ಯಂತರ ಪರಿಹಾರ ನೀಡುವಂತೆ ರಾಜ್ಯ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ ಮಂಗಳೂರು ಮಹಾನಗರ ಪಾಲಿಕೆಗೆ ನಿರ್ದೇಶನ ನೀಡಿತ್ತು.
ಆದರೆ, ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಮೌನ ವಹಿಸಿದ್ದರು. ಈ ಕಾರ್ಯದಲ್ಲಿ ಮೇಲುಸ್ತುವಾರಿ ನೋಡಿಕೊಳ್ಳಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಜವಾಬ್ದಾರಿ ನೀಡಲಾಗಿತ್ತು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಿಲ್ಪಾ ಅವರ ಮುತುವರ್ಜಿ, ಮಧ್ಯಸ್ತಿಕೆ ಹಾಗೂ ಪ್ಯಾನೆಲ್ ವಕೀಲರಾದ ಚಂದ್ರಹಾಸ ಕೊಟ್ಟಾರಿ ಅವರ ನಿರಂತರ ಶ್ರಮದಿಂದ ಪಾಲಿಕೆ ಅಧಿಕಾರಿಗಳು ಕೊನೆಗೂ ಮಧ್ಯಂತರ ಪರಿಹಾರದ ಹಣವನ್ನು ಡೆಪಾಸಿಟ್ ಮಾಡಲು ಮುಂದಾಗಿದ್ದಾರೆ.
ಈ ಪರಿಹಾರ ಕಾರ್ಯ ಫೆಬ್ರವರಿ 11ಕ್ಕೆ ಮಂಗಳೂರು ನ್ಯಾಯಾಲಯದಲ್ಲಿ ನಡೆಯಲಿದ್ದು, ಹೈಕೋರ್ಟ್ ನಿರ್ದೇಶನದಂತೆ ಮೊದಲ ಹಂತದ ಪರಿಹಾರ ಹಸ್ತಾಂತರ ಕಾರ್ಯ ನಡೆಯಲಿದೆ.
ಪರಿಹಾರಕ್ಕೆ ಮೀನ ಮೇಷ ಎಣಿಸುತ್ತಿದ್ದ ಪಾಲಿಕೆ ಅಧಿಕಾರಿಗಳಿಗೆ ಒತ್ತಡ ತಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಫೆಬ್ರವರಿ 3ರಂದು ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಲಾಗಿತ್ತು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದ್ದ ಈ ಸಭೆಯಲ್ಲಿ PWD ನಿಗದಿಪಡಿಸಿದ ಮೌಲ್ಯದ ಪ್ರಕಾರ ಪರಿಹಾರ ನೀಡುವುದಾಗಿ ಪಾಲಿಕೆ ವಾದ ಮಂಡಿಸಿತ್ತು.
ಆದರೆ, ಡಿಎಲ್‌ಎಸ್‌ಎ ಮಧ್ಯಪ್ರವೇಶದಿಂದ ಮಾರುಕಟ್ಟೆ ದರ ಅಥವಾ ಜಿಲ್ಲಾ ನೋಂದಣಾಧಿಕಾರಿಗಳು ನಿಗದಿಪಡಿಸಿದ ದರದ ಪ್ರಕಾರ ಗರಿಷ್ಠಮಿತಿಯನ್ನು ಅನುಸರಿಸಿ ನೀಡಲು ಪಾಲಿಕೆ ಒಪ್ಪಿಕೊಂಡಿತು.
ಇದರಂತೆ ನಾಳೆ ಮಂಗಳೂರು ನ್ಯಾಯಾಲಯದಲ್ಲಿ ಸಂಜೆ 3 ಗಂಟೆಗೆ ಪಚ್ಚನಾಡಿ ಸಂತ್ರಸ್ತರ ಅರ್ಜಿಗಳ ಪರಿಶೀಲನೆ, ದಾಖಲೆಗಳ ಜೋಡಿಸುವಿಕೆ ಕಾರ್ಯ ನಡೆಯಲಿದೆ.
ಈ ಕಾರ್ಯದಲ್ಲಿ ಪ್ಯಾನೆಲ್ ವಕೀಲ ಚಂದ್ರಹಾಸ ಕೊಟ್ಟಾರಿ ಸಂತ್ರಸ್ತರ ಜೊತೆ ನಿರಂತರ ಸಭೆಗಳನ್ನು ನಡೆಸಿದ್ದು, ಅವರೊಂದಿಗೆ ಡಿಎಲ್‌ಎಸ್‌ಎ ಅಧಿಕಾರಿಗಳಾದ ಬಾಲಚಂದ್ರ ಹಾಗೂ ರಫೀಕ್ ಕೂಡ ಕೈಜೋಡಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಚಂದ್ರಹಾಸ ಕೊಟ್ಟಾರಿ, ಪ್ಯಾನೆಲ್ ವಕೀಲರು-8088058047 ಇವರನ್ನು ಸಂಪರ್ಕಿಸಬಹುದು.
Comments are closed.