ಮಂಗಳೂರು, ಫೆಬ್ರವರಿ 10 : ಮಕ್ಕಳ ರಕ್ಷಣೆ ಸೇರಿದಂತೆ ಅವರುಗಳ ಹಕ್ಕುಗಳನ್ನು ಕಾರ್ಯರೂಪಕ್ಕೆ ತರುವುದು ಸಮಾಜದ ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಂಕರಪ್ಪ ಡಿ ತಿಳಿಸಿದರು.
ಅವರು ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಬೆಂಗಳೂರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಮಕ್ಕಳ ಹಕ್ಕುಗಳು ಮತ್ತು ರಕ್ಷಣೆ ಕಾಯ್ದೆಯ ಕುರಿತು ಮಕ್ಕಳ ಮತ್ತು ಅಭಿವೃದ್ಧಿ ಇಲಾಖಾ ಅಧಿಕಾರಿಗಳಿಗೆ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಆಯೋಜಿಸಿದ ಅರಿವು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಮಕ್ಕಳ ಬೆಳವಣಿಗೆ, ಪಾಲನೆ, ಪೋಷಣೆಯ ಬಗ್ಗೆ ಪ್ರತಿಯೊಬ್ಬರು ಒತ್ತು ನೀಡುವುದರೊಂದಿಗೆ ಅವರಿಗೆ ಉತ್ತಮ ಶಿಕ್ಷಣ ಹಾಗೂ ಮಾರ್ಗದರ್ಶನ ನೀಡಿದಾಗ ಭವಿಷ್ಯದಲ್ಲಿ ಮಕ್ಕಳು ಉತ್ತಮ ಸತ್ಪ್ರಜೆಯಾಗಲು ಸಾಧ್ಯ ಎಂದರು.
ಮಕ್ಕಳ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಳ್ಳುವಾಗ ಅಧಿಕಾರಿಗಳು ಅನೇಕ ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆ ಸಮಯದಲ್ಲಿ ಸಾಮಾನ್ಯ ಜ್ಞಾನ ಹಾಗೂ ತಂತ್ರಗಳನ್ನು ಬಳಸಿ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು.
ರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವಾಗ ಕಾನೂನಿನ ಬಗ್ಗೆ ಸರಿಯಾದ ತಿಳುವಳಿಕೆ ಹೊಂದುವುದು ಅವಶ್ಯಕ. ಮಕ್ಕಳ ಹಕ್ಕುಗಳು ಪ್ರಸ್ತುತ ನೀತಿಗಳು ಕಾರ್ಯಗಳು ಸೇರಿದಂತೆ ಇತರ ಚಟುವಟಿಕೆಗಳು ಆಗಾಗ ಪರಿಷ್ಠರಣೆ ಆಗುತ್ತಿವೆ. ಇವುಗಳ ಬಗ್ಗೆ ಅರಿತುಕೊಳ್ಳಲು ಈ ರೀತಿಯ ಕಾರ್ಯಾಗಾರಗಳನ್ನು ನಡೆಸುವುದರಿಂದ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಪಾಪಬೋವಿ ಮಾತನಾಡಿ, ಮಕ್ಕಳು ದೌರ್ಬಲ್ಯರಾಗಿದ್ದು ಅವರ ಮೇಲೆ ಆಗುವಂತಹ ದೌರ್ಜನ್ಯಗಳು ಹಾಗೂ ಹಿಂಸೆಗಳ ಬಗ್ಗೆ ಧ್ವನಿ ಎತ್ತಲು ಮತ್ತು ಅವುಗಳ ಬಗ್ಗೆ ಸೂಕ್ತ ಪ್ರಾಧಿಕಾರಕ್ಕೆ ದೂರು ನೀಡುವ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಅವುಗಳ ಕಷ್ಟಕ್ಕೆ ನಾವು ಸ್ಪಂದಿಸಬೇಕು ಎಂದರು.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೆನ್ನಿ ಪೀಟರ್ ಡಿ’ಸೋಜಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ರಕ್ಷಣಾ ಕಾರ್ಯದಲ್ಲಿ ಎಲ್ಲಾ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಅವರುಗಳ ರಕ್ಷಣೆಯನ್ನು ಸುಲಭವಾಗಿ ಮಾಡಲು ಸಾಧ್ಯ ಎಂದರು.
ಮಕ್ಕಳಿಗಾಗಿ ದೇಶದಲ್ಲಿ ಹಲವು ಕಾಯ್ದೆಗಳಾದ ಬಾಲ್ಯವಿವಾಹ ಕಾಯ್ದೆ, ಬಾಲಕಾರ್ಮಿಕ ನಿಯಂತ್ರಣ ಹಾಗೂ ಬಾಲಕಾರ್ಮಿಕ ನಿಷೇಧ ಕಾಯ್ದೆ, ಜುವೆನೈಲ್ ಜಸ್ಟಿಸ್ ಆಕ್ಟ್, ಪೋಕ್ಸೊ ಕಾಯ್ದೆ, ರಾಷ್ಟ್ರೀಯ ಮಕ್ಕಳ ನೀತಿ ಸೇರಿದಂತೆ ಮತ್ತಿತರ ಕಾಯ್ದೆಗಳನ್ನು ಜಾರಿಗೆ ತಂದಿದೆ. ಇವುಗಳ ಸಮರ್ಪಕ ಅನುಷ್ಠಾನ ಮಾಡಲು ಜನಸಮುದಾಯವು ಪಾಲ್ಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗಟ್ರೂಡ್ ವೇಗಸ್, ತಾಲೂಕುಗಳ ಶಿಶು ಅಭಿವೃದ್ಧಿ ಅಧಿಕಾರಿಗಳಾದ ಶೋಭಾ ಪಿ, ಹರೀಶ್ ಕೆ., ರಶ್ಮಿ, ಪ್ರಿಯಾ ಆಡ್ಮಿಸ್, ಸುಧಾ ಜೋಶಿ, ಗಾಯಿತ್ರಿ ಬಾಯಿ ಉಪಸ್ಥಿತರಿದ್ದರು.
Comments are closed.