ರೌಡಿ ಶೀಟರ್ ಪಿಂಕಿ ನವಾಝ್
ಮಂಗಳೂರು/ ಸುರತ್ಕಲ್: ಫೆಬ್ರವರಿ.10: ಹಿಂದೂ ಸಂಘಟನೆ ಕಾರ್ಯಕರ್ತ ಸುರತ್ಕಲ್ ಸಮೀಪದ ನಿವಾಸಿ ದೀಪಕ್ ರಾವ್ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ರೌಡಿಶೀಟರ್ ನನ್ನು ದುಷ್ಕರ್ಮಿಗಳ ತಂಡವೊಂದು ಬೆನ್ನಟ್ಟಿ ಲಾಂಗ್ ಮಚ್ಚುಗಳಿಂದ ಹಲ್ಲೆ ಮಾಡಿರುವ ಘಟನೆ ಬುಧವಾರ ಸುರತ್ಕಲ್ ಸಮೀಪದ ಕಾಟಿಪಳ್ಳ ಎರಡನೇ ಕ್ರಾಸ್ನ ಬಳಿ ನಡೆದಿದೆ.
ದುಷ್ಕರ್ಮಿಗಳಿಂದ ಹಲ್ಲೆಗೊಳದವನನ್ನು ಕಾಟಿಪಳ್ಳ ನಿವಾಸಿ, ರೌಡಿ ಶೀಟರ್ ಪಿಂಕಿ ನವಾಝ್ 32) ಎಂದು ಗುರುತಿಸಲಾಗಿದ್ದು, ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಬುಧವಾರ ಸಂಜೆ 5 ಗಂಟೆಯ ಸುಮಾರಿಗೆ ಸುರತ್ಕಲ್ ಠಾಣಾ ವ್ಯಾಪ್ತಿಯ ಕಾಟಿಪಳ್ಳದ ಎರಡನೇ ಬ್ಲಾಕ್ ನಲ್ಲಿರುವ ಪುಳಿತ್ತೂರು ನಾಗಬನ ಬಳಿಯ ಲೇ ಔಟ್ ಸಮೀಪ ರಸ್ತೆಬದಿ ಪಿಂಕಿ ನವಾಝ್ ನಿಂತುಕೊಂಡ ಸಂದರ್ಭ ಸ್ಥಳಕ್ಕೆ ಕಾರಿನಲ್ಲಿ ಧಾವಿಸಿದ ನಾಲ್ಕೈದು ದುಷ್ಕರ್ಮಿಗಳು ಮಾರಕಾಸ್ತ್ರದಿಂದ ದಾಳಿ ನಡೆಸಿದ್ದಾರೆ. ಈ ವೇಳೆ ನವಾಝ್ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡರೂ ದುಷ್ಕರ್ಮಿಗಳು ಬೆನ್ನಟ್ಟಿ ಹಲ್ಲೆಗೈದು, ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆಯಲ್ಲಿ ಹೊಟ್ಟೆ, ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡ ಪಿಂಕಿ ನವಾಝ್ ನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದಾನೆ ಎನ್ನಲಾಗುತ್ತಿದೆ.
ಪಿಂಕಿ ನವಾಝ್ ಕಾಟಿಪಳ್ಳ ನಿವಾಸಿಯಾಗಿದ್ದು ಈತನ ವಿರುದ್ಧ ದೀಪಕ್ ರಾವ್ ಕೊಲೆ ಪ್ರಕಾರಣವೂ ಸೇರಿದಂತೆ ಕೊಲೆ, ಕೊಲೆಯತ್ನ, ದರೋಡೆ ಮತ್ತಿತರ ಪ್ರಕರಣಗಳು ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿವೆ.
ಈತನ ವಿರುದ್ಧ ರೌಡಿಶೀಟ್ ತೆರೆಯಲಾಗಿದ್ದು ದೀಪಕ್ ರಾವ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿದ್ದ ಈತ ಕೆಲವು ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದ.
: ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎಂದು ಮೊದಲು ಪ್ರಚಾರವಾಗಿತ್ತು. ಆದರೆ ಗಾಯಾಳು ಪಿಂಕಿ ನವಾಝ್ ಪೊಲೀಸರಿಗೆ ತನ್ನ ಮೇಲೆ ದಾಳಿ ನಡೆಸಿದವರ ಮಾಹಿತಿ ನೀಡಿದ್ದಾನೆ.
ರೌಡಿ ಗ್ಯಾಂಗ್ ಶಾಕಿಬ್ ಮತ್ತು ತಂಡದೊಂದಿಗಿನ ಮನಸ್ತಾಪದಿಂದ ಈ ಕೃತ್ಯ ನಡೆಸಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಒಟ್ಟಾರೆಯಾಗಿ ಹಳೆ ವೈಷಮ್ಯದಿಂದಲೇ ಕೃತ್ಯ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Comments are closed.