ಮಂಗಳೂರು, ಮಾರ್ಚ್ 11 : ಕ್ಷಯ ರೋಗವನ್ನು ಸರಿಯಾಗಿ ಪತ್ತೆ ಹಚ್ಚುವುದರೊಂದಿಗೆ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವುದರಿಂದ ಕ್ಷಯರೋಗ ಮುಕ್ತ ಸಮಾಜವನ್ನು ನಿರ್ಮಾಣ ಮಾಡಬಹುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ. ಕೆ. ವಿ ತಿಳಿಸಿದರು.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ವತಿಯಿಂದ ನಡೆದ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಪಾಲುದಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನಸಮುದಾಯವನ್ನು ಕ್ಷಯರೋಗದಿಂದ ಮುಕ್ತಗೊಳಿಸುವುದೇ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದ ಉದ್ದೇಶವಾಗಿದ್ದು, ಹಿಂದಿನ ವರ್ಷಗಳ ಕ್ಷಯರೋಗದ ವರದಿಗೆ ಹೋಲಿಸಿದರೆ ರೋಗದ ಸಂಖ್ಯೆ ಕಡಿಮೆಯಾಗಿದೆ. ಜಿಲ್ಲೆಯಲ್ಲಿ 2020ನೇ ಸಾಲಿನ ವರದಿಯ ಪ್ರಕಾರ 2,471 ಕ್ಷಯರೋಗಗಳ ಪ್ರಕರಣಗಳು ಪತ್ತೆಯಾಗಿವೆ. ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 8 ಕ್ಷಯ ಚಿಕಿತ್ಸಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.
ಕ್ಷಯರೋಗ ಅಪಾಯಕಾರಿಯಾಗಿದ್ದು, ಅದನ್ನು ತಡೆಗಟ್ಟುವುದು ಅವಶ್ಯಕವಾಗಿದೆ. ಈ ರೋಗವು ಕಫದಿಂದ ಹರಡುವುದರಿಂದ ಪ್ರಾಥಮಿಕ ಹಂತದಲ್ಲಿಯೇ ಕ್ಷಯರೋಗ ನಿರ್ಮೂಲನೆಗೆ ರೋಗಿಯು ಸಹಕರಿಸಬೇಕು. ಕಫದಲ್ಲಿ ಕ್ಷಯರೋಗದ ಕ್ರಿಮಿ ಇರುವ ಒಬ್ಬ ರೋಗಿ ವರ್ಷದಲ್ಲಿ 10 ರಿಂದ 15 ಜನ ಆರೋಗ್ಯವಂತರಿಗೆ ರೋಗವನ್ನು ಹರಡಬಹುದು ಎಂದರು.
ರೋಗ ನಿರೋಧಕ ಶಕ್ತಿಯ ಕೊರತೆ ಇರುವವರಲ್ಲಿ ಕ್ಷಯರೋಗವು ಕಾಣಿಸಿಕೊಳ್ಳುತ್ತದೆ. ಪೌಷ್ಟಿಕಾಂಶದ ಕೊರತೆ, ಮಧುಮೇಹ ಕಾಯಿಲೆ ಇರುವವರು, ಹೆಚ್.ಐ.ವಿ. ಸೋಂಕಿತರು, ಧೂಮಪಾನ ಮಾಡುವವರಲ್ಲಿ ಈ ಕಾಯಿಲೆಯು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ವಿಶ್ವದ ಒಟ್ಟು ಕ್ಷಯ ರೋಗಿಗಳಲ್ಲಿ ಐದನೇಯ ಒಂದು ಭಾಗದಷ್ಟು ರೋಗಿಗಳು ಭಾರತದಲ್ಲಿದ್ದಾರೆ ಎಂದರು.
ಎರಡು ವಾರಗಳ ಕಾಲ ನಿರಂತರ ಸಾಮಾನ್ಯ ಕೆಮ್ಮು ಕಂಡುಬಂದರೆ ಅಂತವರು ಕ್ಷಯರೋಗ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ತೂಕ ಕಡಿಮೆಯಾಗುವುದು, ಎದೆ ನೋವು, ಸುಸ್ತು, ಹಸಿವಾಗದಿರುವುದು, ಸಂಜೆ ವೇಳೆ ಜ್ವರ, ಕಫದಲ್ಲಿ ರಕ್ತ ಬೀಳುವುದು ಮುಂತಾದವು ಕ್ಷಯರೋಗದ ಲಕ್ಷಣಗಳಾಗಿದ್ದು, ಕ್ಷಯರೋಗಿಗಳನ್ನು ಪರೀಕ್ಷೆ ಮಾಡಿ, ಪತ್ತೆಹಚ್ಚಿ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡುವುದರಿಂದ ಅದು ಇತರರಿಗೆ ಹರಡದಂತೆ ಕ್ರಮ ವಹಿಸಬಹುದು ಎಂದರು.
ಕ್ಷಯರೋಗವು ಸಂಪೂರ್ಣವಾಗಿ ಗುಣವಾಗುವ ಕಾಯಿಲೆಯಾಗಿದೆ. ಈ ಕಾಯಿಲೆಗೆ ಡಾಟ್ಸ್ ನೇರ ನಿಗಾವಣಾ ಅಲ್ಪಾವಧಿ ಚಿಕಿತ್ಸೆ –DOTS – (Direct Observation Treatment Short course) ಮೂಲಕ ರೋಗಿಗಳಿಗೆ ಉಚಿತವಾಗಿ 6 ತಿಂಗಳ ಕಾಲ ಚಿಕಿತ್ಸೆ ನೀಡಲಾಗುತ್ತದೆ. ಇನ್ನು ಹೆಚ್ಚಿನ ಔಷಧಿಯ ಅವಶ್ಯಕತೆ ಕಂಡುಬಂದಲ್ಲಿ ರೋಗಿಗಳ ಮನೆ ಸಮೀಪವೇ ಔಷಧಿ ನೀಡುವಂತಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹಾಗೂ ಜನರಿಗೆ ಅನುಕೂಲವಾಗುವಂತೆ ಸರಕಾರದಿಂದ ಉತ್ತಮ ಗುಣಮಟ್ಟದ ಔಷದಿಗಳನ್ನುü ನಿರಂತರ ಸರಬರಾಜು ಮಾಡಲಾಗುತ್ತಿದೆ ಎಂದರು.
ಜನಸಾಮಾನ್ಯರಿಗೆ ರೋಗದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಗ್ರಾಮ ಪಂಚಾಯತ್‍ನ ಸಹಯೋಗ ದೊಂದಿಗೆ ಕ್ಷಯರೋಗದ ಕುರಿತು ಕರಪತ್ರ ಹಂಚುವುದು ಅಥವಾ ಗೋಡೆಗಳಿಗೆ ಅಂಟಿಸುವುದು, ರೇಡಿಯೋ , ಎಫ್.ಎಮ್ ನಲ್ಲಿ ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸುವುದು, ಬೀದಿ ನಾಟಕ ಇತ್ಯಾದಿ ಚಟುವಟಿಕೆಗಳನ್ನು ಆಯೋಜಿಸುವುದರಿಂದ ಸರಿಯಾದ ಮಾಹಿತಿ ನೀಡಲು ಸಾಧ್ಯ ಎಂದರು.
ಕೋವಿಡ್ ಪ್ರಾರಂಭವಾದ ದಿನದಿಂದ ಜನರು ಮಾಸ್ಕ್ ಧರಿಸುತ್ತಿದ್ದಾರೆ, ಇದರಿಂದ ಕೋವಿಡ್ ವೈರಸ್ ಹರಡುವುದನ್ನು ತಡೆಹಿಡಿಯುವುದರೊಂದಿಗೆ ಕ್ಷಯ ರೋಗ ಹರಡುವುದನ್ನು ತಡೆಯಲು ಸಾಧ್ಯವಾಗಿದೆ ಹಾಗಾಗಿ ಮಾಸ್ಕ್ ಧರಿಸುವುದು ಅತೀ ಅವಶ್ಯಕ ಎಂದರು.
ಔಷಧ ಕೇಂದ್ರಗಳಲ್ಲಿ ವೈದ್ಯರ ಚೀಟಿಯನ್ನು ತೋರಿಸದೇ ಔಷಧಿಯನ್ನು ಪಡೆದುಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿರುವುದರಿಂದ ವ್ಯಕ್ತಿಯ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಹುದು. ಆದ್ದರಿಂದ ಔಷಧಿ ಕೇಂದ್ರದಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಜವಾಬ್ದಾರಿ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಎಚ್.ಐ.ವಿ ಹಾಗೂ ಲೈಂಗಿಕ ಕಾರ್ಯಕರ್ತೆಯರಿಂದ ಹೆಚ್ಚಾಗಿ ಕ್ಷಯ ರೋಗ ಹರಡುವ ಸಾಧ್ಯತೆ ಇದ್ದು, ಅವರಿಗೆ ಕೌನ್ಸಿಲಿಂಗ್ ನಡೆಸಿ ರೋಗದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಅರಿವು ಮೂಡಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿ ಡಾ.ಬದ್ರುದ್ದೀನ್ ಜಿಲ್ಲಾ ಪಂಚಾಯತ್‍ನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಗಟ್ಟಿ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಹರೀಶ್ ಚಂದ್ರ, ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ (ಮಂಗಳೂರು ವಿಭಾಗ) ಡಾ. ದೈವೀಗನ್, ಇಂಡಿಯನ್ ಮೆಡಿಕಲ್ ಅಷೋಶಿಯೇಷನ್ ನ ಸದಸ್ಯ ಡಾ. ಅಚ್ಯುತ್ ಕುಡ್ವ, ವೈದ್ಯಕೀಯ ಕಾಲೇಜು ನೋಡಲ್ ಅಧಿಕಾರಿ ಡಾ. ಸೌರಭ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Comments are closed.