ಕರಾವಳಿ

ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದಿಂದ ಅಮೃತಾಭಿವಂದನಂ -ಸನ್ಮಾನ- ಗೌರವಕ್ಕಿಂತ ಪ್ರೀತಿ ದೊಡ್ಡದು : ಪ್ರೊ. ಅಮೃತ ಸೋಮೇಶ್ವರ

Pinterest LinkedIn Tumblr

ಮಂಗಳೂರು : ‘ಸ್ಥಾನ-ಮಾನಕ್ಕಿಂತ ಮಿಗಿಲಾಗಿ ತತ್ವ-ಸಿದ್ಧಾಂತಗಳಿಗಾಗಿ ಬದುಕುವುದು ನಮ್ಮ ಧ್ಯೇಯವಾಗ ಬೇಕು. ಅಂಥವರಿಗೆ ಸಮಾಜದ ಅಭಿಮಾನವೇ ಶ್ರೀರಕ್ಷೆ. ನಾವು ಮಾಡಿದ ಸಾಧನೆಗೆ ಸನ್ಮಾನ ಅಥವಾ ಗೌರವ ಲಭಿಸುವುದು ಸರ್ವೇಸಾಮಾನ್ಯ. ಆದರೆ ಅದಕ್ಕಿಂತ ಜನರು ತೋರುವ ಪ್ರೀತಿಯೇ ದೊಡ್ಡದು’ ಎಂದು ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಪ್ರೊ. ಅಮೃತಸೋಮೇಶ್ವರ ಹೇಳಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ ಆಯ್ಕೆಯಾದ ಸಂದರ್ಭದಲ್ಲಿ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ – ವಿರಾಂಟ್ ವತಿಯಿಂದ ಉಳ್ಳಾಲ ಸೋಮೇಶ್ವರದ ಸ್ವಗ್ರಹ ‘ಒಲುಮೆ’ ಯಲ್ಲಿ ಏರ್ಪಡಿಸಲಾದ ‘ಅಮೃತಾಭಿವಂದನಂ’ ಕಾರ್ಯಕ್ರಮದಲ್ಲಿ ಸನ್ಮಾನಕ್ಕೆ ಪ್ರತಿಯಾಗಿ ಅವರು ಮಾತನಾಡಿದರು.

ಮಾರ್ಗದರ್ಶಕ ವಿದ್ವಾಂಸರು:

ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಮಾಡಿ ‘ಸಾಹಿತ್ಯ ಹಾಗೂ ಸಾಂಸ್ಕೃತಿಕ ರಂಗದಲ್ಲಿ ದುಡಿಯುವ ನೂರಾರು ಎಳೆಯರಿಗೆ ಅಮೃತರು ಓರ್ವ ಮಾರ್ಗದರ್ಶಕ ವಿದ್ವಾಂಸರು. ಎಂಬತ್ತಾರರ ಹರೆಯದಲ್ಲೂ ಜೀವನ ಪ್ರೀತಿಯೊಂದಿಗೆ ಸದಾ ಬರವಣಿಗೆಯಲ್ಲಿ ತೊಡಗಿರುವ ಅವರು ಬೆಳೆಯುವ ಕವಿ – ಸಾಹಿತಿಗಳಿಗೆ ಆದರ್ಶಪ್ರಾಯರು. ಉಳ್ಳಾಲ ಅಬ್ಬಕ್ಕ ಉತ್ಸವ ಸಮಿತಿಯ ಪ್ರಧಾನ ಸಲಹೆಗಾರರಾಗಿ ಅವರ ಸೇವೆ ಸ್ಮರಣೀಯ’ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಡಾ.ಅಮೃತ ಸೋಮೇಶ್ವರ ಮತ್ತು ನರ್ಮದಾ ಸೋಮೇಶ್ವರ ದಂಪತಿಯನ್ನು ಮೈಸೂರು ಪೇಟ, ಶಾಲು, ಸ್ಮರಣಿಕೆ ಮತ್ತು ಫಲತಾಂಬೂಲ ನೀಡಿ ಸನ್ಮಾನಿಸಲಾಯಿತು.

ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ್ ಕುಮಾರ್ ಸ್ವಾಗತಿಸಿದರು. ವಿರಾಂಟ್ ಕೋಶಾಧಿಕಾರಿ ಪಿ.ಡಿ.ಶೆಟ್ಟಿ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿಗಳಾದ ವಿಜಯ ಲಕ್ಷ್ಮೀ ಕಟೀಲು ಮತ್ತು ಸುಮಾ ಪ್ರಸಾದ್ ಸಹಕರಿಸಿದರು. ಜೀವನ್ ಸೋಮೇಶ್ವರ ಮತ್ತು ಸತ್ಯಾ ಜೀವನ್ ಉಪಸ್ಥಿತರಿದ್ದರು.

Comments are closed.