ಮಂಗಳೂರು, ಮಾರ್ಚ್.12: ಮಂಗಳೂರಿನ ಪ್ರತಿಷ್ಠಿತ ವಿಕಾಸ್ ಶಿಕ್ಷಣ ಸಂಸ್ಥೆಯೊಂದಿಗೆ ರಾಜಸ್ಥಾನ ಕೋಟದ ಎಲೆನ್ ಕೆರಿಯರ್ ಇನ್‌ಸ್ಟಿಟ್ಯೂಟ್ ಸಂಸ್ಥೆ ಕೈ ಜೋಡಿಸಿದ್ದು, ಇದರ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ 12.03.2021ರಂದು ಮಂಗಳೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರಿನ ಖ್ಯಾತ ವೈದ್ಯ,ನಿಟ್ಟೆ ವಿಶ್ವ ವಿದ್ಯಾಲಯದ ಪ್ರೊ ಚಾನ್ಸೆಲರ್ ಡಾ.ಶಾಂತರಾಮ ಶೆಟ್ಟಿ, ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇ ಆದ ಹೆಗ್ಗುರುತು ಮೂಡಿಸಿರುವ ಮಂಗಳೂರಿನಲ್ಲಿ ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ಎಲೆನ್ ತನ್ನ ಕೇಂದ್ರವನ್ನು ವಿಕಾಸ್ ಕಾಲೇಜಿನ ಸಹಭಾಗಿತ್ವದಲ್ಲಿ ತೆರೆಯುತ್ತಿರುವುದು ಹೆಮ್ಮೆಯ ವಿಷಯ. ಇದರಿಂದ ಸಾವಿರಾರು ವಿದ್ಯಾರ್ಥಿಗಳ ಕಲಿಕೆಗೆ ಪ್ರಯೋಜನಕಾರಿಯಾಗಲಿದೆ ಎಂದರು.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರನ್ನು ದೇಶದ ಸತ್ಪ್ರಜೆಗಳಾಗಿ ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕ ಸಮುದಾಯದ ಮೇಲಿದೆ. ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಮೂಲಕ ಅವರನ್ನು ದೇಶದ ಆಸ್ತಿಯನ್ನಾಗಿಸಬೇಕು. ವಿಕಾಸ್ ಸಂಸ್ಥೆ ಎಲೆನ್ ಸಂಸ್ಥೆಯೊಂದಿಗೆ ಕೈ ಜೋಡಿಸುವ ಮೂಲಕ ಈ ಭಾಗದ ವಿದ್ಯಾರ್ಥಿಗಳು ಐಐಟಿ, ಜೆಇಇ, ನೀಟ್‌ನಂತಹ ಪರೀಕ್ಷೆ ಎದುರಿಸಲು ಸುಲಭ ವ್ಯವಸ್ಥೆ ಮಾಡಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುವಂತಾಗಲಿ ಎಂದು ಆಶಿಸಿದರು.
ಎಲೆನ್ ಕೆರಿಯರ್ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥ ಪಂಕಜ್ ಅಗರ್‌ವಾಲ್ ಮಾತನಾಡಿ, ಎಲೆನ್ ಸಂಸ್ಥೆ ದೇಶಾದ್ಯಂದ ತನ್ನ ಕೇಂದ್ರವನ್ನು ಹೊಂದಿದ್ದು, ಮಂಗಳೂರಿನಲ್ಲಿ 41ನೇ ಕೇಂದ್ರವನ್ನು ವಿಕಾಸ್ ಸಂಸ್ಥೆಯ ಮೂಲಕ ಆರಂಭಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಮಂಗಳೂರಿಗೆ ಒಳ್ಳೆಯ ಹೆಸರಿದೆ. ಇಲ್ಲಿ ಕೇಂದ್ರ ಆರಂಭಿಸಿರುವುದಕ್ಕೆ ತಮಗೆ ಹೆಮ್ಮೆಯಿದೆ ಎಂದರು.
2013ರವರೆಗೆ ಕೇವಲ ರಾಜಸ್ಥಾನದ ಕೋಟದಲ್ಲಿ ಮಾತ್ರ ಕೇಂದ್ರ ಹೊಂದಿದ್ದು, ಇದೀಗ ದೇಶದ ವಿವಿಧೆಡೆ ಕೇಂದ್ರವನ್ನು ತೆರೆಯುವ ಮೂಲಕ ಯಶಸ್ವಿಯಾಗಿ ದಾಪುಗಾಲಿಕ್ಕುತ್ತಿದ್ದೇವೆ. 2013ರಲ್ಲಿ ಚಂಡೀಘಡ ಮತ್ತು ಅಹಮದಾಬಾದ್‌ನಲ್ಲಿ ಕೇಂದ್ರ ತೆರೆಯಲಾಗಿತ್ತು. ಬಳಿಕ ಜಯಪುರ, ಬೆಂಗಳೂರು, ಪಾಂಡಿಚೇರಿ, ಕೊಚ್ಚಿನ್ ಮುಂತಾದೆಡೆ ಕೇಂದ್ರ ತೆರೆಯುವ ಮೂಲಕ ಸಂಸ್ಥೆ ವಿದ್ಯಾರ್ಥಿಗಳ ಮಿತ್ರನಾಗಿ ಬೆಳೆದಿದೆ.
ಐಐಟಿ, ಜೆಇಇ ಸೇರಿದಂತೆ ಹೆಚ್ಚಿನ ಪ್ರಥಮ ರ್‍ಯಾಂಕ್‌ಗಳು ತಮ್ಮ ಸಂಸ್ಥೆಗೇ ಬರುತ್ತಿರುವುದು ನಮ್ಮ ಹೆಗ್ಗಳಿಕೆ ಯಾಗಿದೆ. ಸಂಸ್ಕಾರ್ ಸೆ ಸಫಲತಾ ತಕ್ ಧ್ಯೇಯವಾಕ್ಯದೊಂದಿಗೆ ಸಂಸ್ಥೆ ಮುನ್ನಡೆಯುತ್ತಿದೆ ಎಂದರು.
ಎಲೆನ್ ಸೌತ್ ಇಂಡಿಯಾ ಅಕಾಡೆಮಿಕ್ ಹೆಡ್ ಮಹೇಶ್ ಯಾದವ್ ಮಾತನಾಡಿ, ಎಲೆನ್ ಸಂಸ್ಥೆ ದೇಶವ್ಯಾಪಿಯಾಗಿ ಉತ್ತಮ ಹೆಸರು ಗಳಿಸಿದೆ. ಪ್ರತಿ ಕೇಂದ್ರದಲ್ಲೂ ಉತ್ತಮ ಫಲಿತಾಂಶ ದಾಖಲಿಸುತ್ತಿದೆ ಮಂಗಳೂರಿನಲ್ಲೂ ಇದು ಮುಂದುವರಿಯಲಿದೆ ಎಂದರು.
ವಿಕಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಕೃಷ್ಣ ಜೆ ಪಾಲೆಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವಿಕಾಸ್ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಗುರುತು ಮೂಡಿಸಿದೆ. ಇದೀಗ ಎಲೆನ್ ಸಂಸ್ಥೆಯೊಂದಿಗೆ ಕೈ ಜೋಡಿಸಿದ್ದು, ಈ ಮೂಲಕ ಐಐಟಿ, ನೀಟ್ ನಂತಹ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಲಿದೆ. ವಿದ್ಯಾರ್ಥಿಗಳು ಉನ್ನತ ಮಟ್ಟದ ಸಾಧನೆ ತೋರಬೇಕೆಂಬುದೇ ನಮ್ಮ ಬಯಕೆ ಎಂದು ಪಾಲೆಮಾರ್ ನುಡಿದರು.
ಇದೇ ಸಂದರ್ಭ ಪಾಲೆಮಾರ್ ಅವರ ಗುರುಗಳಾದ ಚಂದ್ರಶೇಖರ್, ವಿಕಾಸ್ ಸಂಸ್ಥೆಯ ಬೆಳವಣಿಗೆಯಲ್ಲಿ ಶ್ರಮಿಸಿದ ಉಪನ್ಯಾಸಕರಾದ ರಾಜೇಂದ್ರ ಮತ್ತು ಶ್ರೀಪತಿ ರಾವ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಲೆನ್ ಕೆರಿಯರ್ ಇನ್‌ಸ್ಟಿಟ್ಯೂಟ್ ಮಂಗಳೂರು ವಿಭಾಗದ ಮುಖ್ಯಸ್ಥ ವಿಪಿನ್ ನಾರಾಯಣನ್ ತಮ್ಮ ಅನುಭವವನ್ನು ಹಂಚಿಕೊಂಡರು. ವಿಕಾಸ್ ಸಂಸ್ಥೆಯ ಕಾರ್ಯದರ್ಶಿ ಜೆ.ಕೆ.ರಾವ್ ವಂದಿಸಿದರು.
Comments are closed.