ಕಾರ್ಕಳ : ಕರ್ನಾಟಕದ ಕರೆನಾಡಾದ ತುಳುನಾಡು ತನ್ನದೇ ಆದ ವೈಶಿಷ್ಟ್ಯತೆಯನ್ನು ಮೆರೆದ ನಾಡು. ಹಲವು ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳ ನೆಲೆವೀಡಿದು. ಇಲ್ಲಿ ದೈವಾರಾಧನೆ, ಭೂತಾರಾಧನೆ, ನೇಮ, ಉತ್ಸವಗಳು, ಕಲೆ, ಸಾಹಿತ್ಯ, ಯಕ್ಷಗಾನ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳು ವರ್ಷದುದ್ದಕ್ಕೂ ನಡೆಯುತ್ತಲೇ ಇರುತ್ತವೆ. ಪ್ರತಿಯೊಂದು ಊರಿನಲ್ಲೂ ಒಂದಲ್ಲಾ ಒಂದು ಪ್ರಸಿದ್ಧವಾದ ಧಾರ್ಮಿಕ ಕ್ಷೇತ್ರ ಇದ್ದೇ ಇದೆ. ಅಂತಹ ಊರುಗಳ ಪೈಕಿ ಪಳ್ಳಿಯೂ ಒಂದು.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪುಟ್ಟ ಗ್ರಾಮ ಪಳ್ಳಿ. ಉಡುಪಿಯಿಂದ ಮೂಡುಬೆಳ್ಳೆ ಮಾರ್ಗವಾಗಿ 19 ಕಿ.ಮೀ ಕ್ರಮಿಸಿದರೆ ಹಚ್ಚಹಸಿರಿನ ನಡುವೆ ಕಂಗೊಳಿಸುವ ಈ ಊರು ಸಿಗುತ್ತದೆ. ಅದೇ ರೀತಿ ಕಾರ್ಕಳದಿಂದ ಬೈಲೂರು ಅಥವಾ ಕುಂಟಾಡಿ ಮಾರ್ಗವಾಗಿ ಸಾಗಿದರೂ ಕೇವಲ 19 ಕಿ.ಮೀ ದೂರದಲ್ಲಿ ಈ ಊರಿದೆ.
ಅಲ್ಲಲ್ಲಿ ಎದುರುಗೊಳ್ಳುವ ಮಲ್ಲಿಗೆ ತೋಟ, ಗದ್ದೆ, ತೆಂಗು ಕಂಗುಗಳ ಹಾದಿಯಲ್ಲಿ ಸಾಗುವಾಗ ಸಿಗುವ ಈ ಪುಟ್ಟ ಊರಿನಲ್ಲೀಗ ಸಂಭ್ರಮವೇರ್ಪಟ್ಟಿದೆ. ಇದಕ್ಕೆ ಕಾರಣವೂ ಇದೆ. ಪಳ್ಳಿ ಗ್ರಾಮದ ಪ್ರಸಿದ್ಧ ಶ್ರೀ ಮಹಾಕಾಳಿ ಮಠ(ಮಂಗಲ್ದಿ ಮಠ) ಮತ್ತು ವರ್ತೆ ಕಲ್ಕುಡ ದೈವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿವೆ. ಕ್ಷೇತ್ರದ ಆಡಳಿತ ಮಂಡಳಿ ಮತ್ತು ಸಮಿತಿಯ ಸರ್ವ ಸದಸ್ಯರು, ಭಕ್ತಾದಿಗಳು ಈ ಧಾರ್ಮಿಕ ಕಾರ್ಯದ ಯಶಸ್ಸಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.
ಕಾರಣಿಕದ ಕ್ಷೇತ್ರವಿದು…
ತುಳುನಾಡಿನ ಹಲವಾರು ಪ್ರಸಿದ್ಧ ಕ್ಷೇತ್ರಗಳ ಪೈಕಿ ಪಳ್ಳಿಯ ಮಂಗಲ್ದಿ ಮಠವೂ ಒಂದು. ಪುರಾತನ ಹಾಗೂ ಕಾರಣಿಕದ ಕ್ಷೇತ್ರವಾದ ಇಲ್ಲಿ ಪ್ರಧಾನ ಶಕ್ತಿಯಾಗಿ ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿ ತ್ರಿಗುಣಾತ್ಮಕ ಶಕ್ತಿಯಾಗಿ ಶ್ರೀ ಚಕ್ರಸ್ವರೂಪಿಣಿಯಾಗಿ ತಾಯಿ ನೆಲೆಸಿದ್ದಾಳೆ. ಹಾಗೂ ಗೋಪಾಲಕೃಷ್ಣ ದೇವರು, ಗಣಪತಿ, ಶ್ರೀ ದೇವಿ ಭೂದೇವಿ ಸಹಿತ ಶ್ರೀನಿವಾಸ ದೇವರುಗಳ ಸಾನಿಧ್ಯ ಇದೆ.
ಕ್ಷೇತ್ರದಲ್ಲಿ ಪ್ರಮುಖವಾಗಿ ದೇವರ ಬಲ ಭಾಗದಲ್ಲಿ ದೈವರಾಜ ವರ್ತೆ ಕಲ್ಕುಡ ನೆಲೆಸಿದ್ದಾರೆ. ಇಲ್ಲಿನ ದೇವರು ಹಾಗೂ ದೈವ ಸಾನಿಧ್ಯ ಪುರಾತನದಲ್ಲಿ ಹಳೇ ಮಠದಲ್ಲಿತ್ತು. ಬಂಡೆಕಲ್ಲಿನ ಮಧ್ಯೆ ನೀರು ಹರಿಯುವ ಜಾಗದಲ್ಲಿ ಸಾನಿಧ್ಯ ಇತ್ತು. ಅಲ್ಲಿಂದ ಮುಂದೆ ಈಗ ಇರುವ ಜಾಗದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಅಂದಿನಿಂದ ಸಾನಿಧ್ಯ ಬೆಳಗುತ್ತಾ ಭಕ್ತರ ಅಭೀಷ್ಠಗಳನ್ನು ಈಡೇರಿಸುವ ಮಹಾಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ.
ಜೀರ್ಣೋದ್ಧಾರಕ್ಕೆ ಸಂಕಲ್ಪ :
ಇಲ್ಲಿ ವಾರದ ಮಂಗಳವಾರ, ಸಂಕ್ರಮಣದಂದು ವಿಶೇಷ ಪೂಜೆ ಹಾಗೂ ಪ್ರತೀ ಹುಣ್ಣಿಮೆಯಂದು ಹುಣ್ಣಿಮೆ ಪೂಜೆ, ಚತುರ್ಥಿ ಗಣಯಾಗ, ಶ್ರೀ ಕೃಷ್ಣಾಷ್ಟಮಿ, ಯುಗಾದಿ, ನವರಾತ್ರಿ ಮಹೋತ್ಸವದಲ್ಲಿ ದುರ್ಗಾನಮಸ್ಕಾರ, ಚಂಡಿಕಾಯಾಗ, ದುರ್ಗಾಹೋಮ ಇನ್ನಿತರ ಸೇವೆಗಳು ನಡೆಯುತ್ತವೆ.
ವರ್ಷಕ್ಕೊಮ್ಮೆ ಕಾಲಾವಧಿ ನೇಮೋತ್ಸವವು ಸಾರ್ವಜನಿಕ ಅನ್ನಸಂತರ್ಪಣೆಯೊಂದಿಗೆ ಬಹಳ ವಿಜೃಂಬಣೆಯಿಂದ ನಡೆಯುತ್ತದೆ. ಈ ಸಂದರ್ಭದಲ್ಲಿ ಭಕ್ತರು ತಮ್ಮ ಸಮಸ್ಯೆಯನ್ನು ದೈವದ ಹತ್ತಿರ ಹೇಳಿಕೊಳ್ಳುತ್ತಾರೆ. ದೈವದ ವಾಕ್ಯದ ಪ್ರಕಾರ ತಮ್ಮ ಸಮಸ್ಯೆಯನ್ನು ಈಡೇರಿಸಿಕೊಳ್ಳುತ್ತಾರೆ. ವಾಕ್ ತೀರ್ಮಾನ, ಜಾಗದ ತೀರ್ಮಾನ ಯಾವುದೇ ಸಮಸ್ಯೆಯನ್ನು ಕೂಡ ಪರಿಹಾರ ಮಾಡುವ ಮಹಾಕ್ಷೇತ್ರವಿದು. ಇಲ್ಲಿನ ದೈವ ಮಾತನಾಡುವ ಕಲ್ಕುಡ ಎಂದೇ ಪ್ರಸಿದ್ಧಿ ಪಡೆದಿದೆ.
ಈ ಎಲ್ಲಾ ಕಾರಣಗಳಿಂದ ಅಜೀರ್ಣವಾದ ಕ್ಷೇತ್ರವನ್ನು ಪುನಃ ಜೀರ್ಣೋದ್ಧಾರಗೊಳಿಸಬೇಕೆಂದು ತಾಯಿಯ ಅನುಗ್ರಹ ಪ್ರಕಾರ ಹಾಗೂ ದೈವದ ಅಭಯ ವಾಕ್ಯದ ಪ್ರಕಾರ ಮಾಡಬೇಕೆಂದು ಶ್ರೀ ಮಹಾಕಾಳಿ ಮಠ(ಮಂಗಲ್ದಿ ಮಠ) ಮತ್ತು ವರ್ತೆ ಕಲ್ಕುಡ ದೈವಸ್ಥಾನ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ನಿರ್ಧರಿಸಿದೆ.
ಆ ಪ್ರಕಾರ ಕ್ಷೇತ್ರದಲ್ಲಿ ದೈವಜ್ಞರ ಮುಖಾಂತರ ಅಷ್ಠಮಂಗಳ ಪ್ರಶ್ನೆಯನ್ನು ಇಟ್ಟು ರಾಶಿ ಚಿಂತನೆ ಮಾಡಿ ಪ್ರಾಯಶ್ಚಿತ್ತ ಕಾರ್ಯವನ್ನು ಪೂರೈಸಲಾಗಿದೆ. ಪ್ರಸ್ತುತ ದೇವರ ಹಾಗೂ ದೈವದ ಗರ್ಭಗುಡಿ ನಿರ್ಮಾಣವಾಗಿ ಪ್ರತಿಷ್ಠೆ ಮಾಡಲಾಗಿರುತ್ತದೆ. ಹಾಗೂ ಸುತ್ತು ಪೌಳಿಯ ಕಾಮಗಾರಿ ಪ್ರಗತಿಯಲ್ಲಿರುತ್ತದೆ.
ಮುಂದಿನ ಕಾಮಗಾರಿಗಳಾದ ಕಲ್ಕುಡ ದೈವಸ್ಥಾನದ ಮುಂಭಾಗದ ಮೇಲ್ಛಾವಣಿ, ಮುಂಭಾಗದ ಅಂಗಣ, ಅಶ್ವತ್ಥಕಟ್ಟೆ ನಿರ್ಮಾಣ, ದೇವಸ್ಥಾನದ ಬಾವಿ ಅಭಿವೃದ್ಧಿ, ಆವರಣ ಗೋಡೆ ಇತ್ಯಾದಿ ಕಾಮಗಾರಿಗಳನ್ನು ಊರ ಹಾಗೂ ಪರವೂರ ಭಕ್ತರ ಮೂಲಕ ಮಾಡಬೇಕೆಂದು ಸಮಿತಿ ನಿರ್ಧರಿಸಿದೆ. ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡು, ಮೇ ತಿಂಗಳಿನಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ.
‘ಹಳ್ಳಿ ಪ್ರದೇಶವಾದ ಪಳ್ಳಿಯ ಪ್ರಸಿದ್ಧ ಕ್ಷೇತ್ರವಾದ ಮಹಾಕಾಳಿ ಮಠ ಮತ್ತು ಕಲ್ಕುಡ ದೈವಸ್ಥಾನ ಬೆಳಗುತ್ತಿದೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ. ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದ ಶುಭ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು’ ಎನ್ನುತ್ತಾರೆ ಶ್ರೀ ಕ್ಷೇತ್ರದ ಅರ್ಚಕರಾದ ಗಣಪತಿ ಭಟ್.
ಶ್ರೀ ಕ್ಷೇತ್ರದ ಮೊಕ್ತೇಸರರಾದ ಶೇಖರ ಹೆಗ್ಡೆ, ಸಂಚಾಲಕರು, ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಬ್ರಹ್ಮ ಕಲಶೋತ್ಸವವನ್ನು ಯಶಸ್ವಿಯಾಗಿ ನಡೆಸುವಲ್ಲಿ ಪಣತೊಟ್ಟಿದ್ದು, ಈ ನೆಲೆಯಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ಹೀಗೆ ಕೈ ಜೋಡಿಸಬಹುದು :
ಈ ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗೆ ಭಕ್ತಾದಿಗಳ ಸಹಕಾರ ಅತ್ಯಗತ್ಯ. ಕ್ಷೇತ್ರದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವಕ್ಕೆ ಕೈ ಜೋಡಿಸುವವರು ಶ್ರೀ ಮಹಾಕಾಳಿ ಮಠ ಬಿ. ಸಮಿತಿ ಇದರ ಕೆನರಾ ಬ್ಯಾಂಕ್ ಪಳ್ಳಿ ಶಾಖೆ ಖಾತೆ ಸಂಖ್ಯೆ 110000901336 ( IFSC CODE-CNRB0010194 ) ಮೂಲಕ ನೆರವಾಗಬಹುದು.
ಪ್ರತಿಯೊಬ್ಬರ ಕೂಡುವಿಕೆಯಿಂದ ಮಾತ್ರ ಯಾವುದೇ ಕಾರ್ಯ ಯಶಸ್ವಿಯಾಗಲು ಸಾಧ್ಯ. ಊರ-ಪರವೂರಿನ ಪ್ರತಿಯೊಬ್ಬರು ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕ್ಷೇತ್ರದ ಅರ್ಚಕರಾದ ಗಣಪತಿ ಭಟ್ ಮನವಿ ಮಾಡಿದ್ದಾರೆ.
Comments are closed.