ಮಂಗಳೂರು : ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಮೇ 25ರಂದು ‘ಪಟ್ಲ ಸಂಭ್ರಮ 2021’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ಈ ಸಂದರ್ಭ ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ‘ಪಟ್ಲ ಪ್ರಶಸ್ತಿ 2021’ ಪ್ರದಾನ ಮಾಡಲಾಗುವುದು. ಪ್ರಶಸ್ತಿ ಒಂದು ಲಕ್ಷ ರೂ. ನಗದು, ಬೆಳ್ಳಿ ಪದಕ ಒಳಗೊಂಡಿದೆ.
ಬರೋಡ ತುಳು ಸಂಘ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಸಂಪೂರ್ಣ ಪಟ್ಲ ಸಂಭ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಮೇ 25ರಂದು ಬೆಳಗ್ಗೆ 9ರಿಂದ ರಾತ್ರಿ 12ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಕಲಾವಿದರಿಗಾಗಿ ವಿವಿಧ ಯೋಜನೆಗಳಡಿ ಧನಸಹಾಯ ವಿತರಿಸಲಾಗುವುದು. ಕಲಾವಿದರಿಗೆ ಅಪಘಾತ ವಿಮೆ ಯೋಜನೆ, ಮನೆ ಕಟ್ಟಲು ನೆರವು, ಅನಾರೋಗ್ಯದಲ್ಲಿರುವವರಿಗೆ ಚಿಕಿತ್ಸಾ ವೆಚ್ಚ, ಗೌರವಧನ ವಿತರಣೆ, ಯಕ್ಷಕಲಾ ಗೌರವ ಹಾಗೂ ಕಲಾವಿದರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಿಸಲಾಗುವುದು.
ಪೂರ್ವರಂಗ, ಗಾನ ವೈಭವ, ಮಹಿಳಾ ಯಕ್ಷಗಾನ, ತುಳು ತಾಳಮದ್ದಳೆ, ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಬಯಲಾಟ ಆಯೋಜಿಸಲಾಗಿದೆ. ಟ್ರಸ್ಟ್ ಕಳೆದ 6 ವರ್ಷಗಳಲ್ಲಿ ಯಕ್ಷಗಾನ ಕಲಾವಿದರಿಗಾಗಿ 5 ಕೋಟಿ ರೂ.ಗಿಂತ ಅಧಿಕ ಮೊತ್ತ ವಿನಿಯೋಗಿಸಿದೆ ಎಂದು ವಿವರಿಸಿದರು.
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ :
ಪಟ್ಲ ಸಂಭ್ರಮ ಅಂಗವಾಗಿ ಯಕ್ಷಗಾನ ಕಲಾವಿದರ (ವೃತ್ತಿಪರ/ಹವ್ಯಾಸಿ/ಮಹಿಳಾ) ಮಕ್ಕಳಿಂದ 2021ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. 2020ರ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ. 60ಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿದ ಎಲ್ಲ ಯಕ್ಷಗಾನ ಕಲಾವಿದರ ಮಕ್ಕಳಿಗೆ ಪ್ರೋತ್ಸಾಹಧನ ನೀಡಲಾಗುವುದು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕೂ ಮೇಲ್ಪಟ್ಟು ಅತ್ಯಕ ಅಂಕ ಗಳಿಸಿದ ತಲಾ ಒಬ್ಬ ವಿದ್ಯಾರ್ಥಿ/ ವಿದ್ಯಾರ್ಥಿನಿಗೆ ಬಂಗಾರದ ಪದಕದೊಂದಿಗೆ ‘ಪ್ರತಿಭಾ ಪುರಸ್ಕಾರ’ ನೀಡಲಾಗುವುದು.
ಅರ್ಜಿ ನಮೂನೆಯನ್ನು ಮಂಗಳೂರಿನ ಎಂಜಿ ರಸ್ತೆಯಲ್ಲಿರುವ ಎಂಪಾಯರ್ ಮಾಲ್‌ನಲ್ಲಿರುವ ಟ್ರಸ್ಟ್‌ನ ಕೇಂದ್ರ ಕಚೇರಿಯಿಂದ ಪಡೆದುಕೊಳ್ಳಬಹುದು.
ಶೀಘ್ರದಲ್ಲಿ ಸಾಮಾಜಿಕ ಜಾಲತಾಣದ ಮೂಲಕವೂ ಅರ್ಜಿ ನಮೂನೆ ನೀಡಲಾಗುವುದು. ಅರ್ಜಿ ಸಲ್ಲಿಸಲು ಮೇ 10 ಕೊನೆಯ ದಿನ.
ಹೆಚ್ಚಿನ ವಿವರಗಳಿಗೆ ಉಪಾಧ್ಯಕ್ಷ ಡಾ. ಮನು ರಾವ್ (ದೂ. 9844087664) ಅವರನ್ನು ಸಂಪರ್ಕಿಸಬಹುದು ಎಂದರು.
ಟ್ರಸ್ಟ್‌ನ ಪ್ರಧಾನ ಸಂಚಾಲಕ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಡಾ. ಮನು ರಾವ್, ಕೋಶಾಧಿಕಾರಿ ಸುದೇಶ್ ಕುಮಾರ್ ರೈ, ಪ್ರಧಾನ ಕಾರ್ಯದರ್ಶಿ ಅಡ್ಯಾರ್ ಪುರುಷೋತ್ತಮ ಭಂಡಾರಿ, ಸಂಘಟನಾ ಕಾರ್ಯದರ್ಶಿ ಬಾಳ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು.
ಚಿಕಿತ್ಸೆಗಾಗಿ 50 ಸಾವಿರ ರೂ. ನೆರವು :
ಅನಾರೋಗ್ಯದಿಂದ ಬಳಲುತ್ತಿರುವ ಯಕ್ಷಗಾನ ಹಿರಿಯ ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ಚಿಕಿತ್ಸೆಗಾಗಿ ಪಟ್ಲ ಟ್ರಸ್ಟ್ ವತಿಯಿಂದ ಈ ಸಂದರ್ಭ 50 ಸಾವಿರ ರೂ. ಹಸ್ತಾಂತರಿಸಲಾಯಿತು. ಪುರುಷೋತ್ತಮ ಪೂಂಜ ಅವರ ಪುತ್ರ ನೆರವು ಸ್ವೀಕರಿಸಿದರು.
Comments are closed.