ಕರಾವಳಿ

ಕುಲಶೇಖರ ದರೋಡೆ ಪ್ರಕರಣ : ಮತ್ತೆ ಐವರು ಆರೋಪಿಗಳ ಬಂಧನ – ದರೋಡೆ ಜೊತೆ ಕೊಲೆಗೆ ಸಂಚು ರೂಪಿಸಿದ ಆರೋಪ

Pinterest LinkedIn Tumblr

ಮಂಗಳೂರು : ನಗರದ ಕುಲಶೇಖರ ಕಟ್ಟೆಯ ಬಳಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮತ್ತೆ ಐವರು ಆರೋಪಿಗಳನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಜೈಲಿನಲ್ಲಿರುವ ರೌಡಿ ಶೀಟರ್ ಆಕಾಶ್‌ಭವನ ಶರಣ್‌ನ ತಮ್ಮ ಧೀರಜ್ ಯಾನೆ ಕುಟ್ಟ ಆಕಾಶಭವನ (26), ಆಕಾಶಭವನದ ಸಾಗರ್ (23) , ಎಕ್ಕಾರಿನ ರಾಜೇಶ್ ಆಚಾರ್ಯ(38), ಬಜ್ಪೆ ಆದ್ಯಪಾಡಿಯ ರಾಕೇಶ್ ಕಂಬಳಿ ಯಾನೆ ರಾಕಿ (25), ಮಧ್ಯಪ್ರದೇಶದ ರಾಜೇಶ್ ಥೋಮರ್ ಯಾನೆ ರಾಜ್ಬೀರ್ (31 ಬಂಧಿತ ಆರೋಪಿಗಳು.

ಕುಲಶೇಖರ ಕಟ್ಟೆಯ ಬಳಿ ಕೆಲವು ದಿನಗಳ ಹಿಂದೆ ನಡೆದ ದರೋಡೆ ಪ್ರಕರಣವೊಂದರ ಆರೋಪಿಗಳಾದ ದೀಕ್ಷಿತ್ ಯಾನೆ ದೀಕ್ಷು ಕುಂಡಕೋರಿ ಯಾನೆ ದೀಕ್ಷಿತ್ ಪೂಜಾರಿ, ಚಂದ್ರ ಯಾನೆ ಚಂದ್ರಹಾಸ ಪೂಜಾರಿ, ಪ್ರಜ್ವಲ್ ಯಾನೆ ಹೇಮಚಂದ್ರ, ಸಂತೋಷ್ ಪೂಜಾರಿ ಯಾನೆ ನಾಯಿ ಸಂತು ಎಂಬವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ವಿಚಾರಣೆ ಸಂದರ್ಭ ಈ ಆರೋಪಿಗಳು ನೀಡಿದ ಮಾಹಿತಿಯಂತೆ ಈ ಮೇಲಿನ ಐದು ಮಂದಿ ಆರೋಪಿಗಳನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈ ಒಂಭತ್ತು ಮಂದಿ ಆರೋಪಿಗಳೂ ಕೂಡ ರೌಡಿ ಆಕಾಶಭವನದ ಶರಣ್ ಯಾನೆ ರೋಹಿದಾಸ್‌ನ ಸಹಚರರು ಎನ್ನಲಾಗಿದೆ.

ಬಂಧಿತ ಒಂಭತ್ತು ಮಂದಿಯೂ ನಗರದ ಮತ್ತೊಂದು ಕ್ರಿಮಿನಲ್ ಗ್ಯಾಂಗ್‌ವೊಂದರಲ್ಲಿ ಸಕ್ರಿಯರಾಗಿರುವ ರೌಡಿಗಳಾದ ಪ್ರದೀಪ್ ಮೆಂಡನ್, ಮಂಕಿಸ್ಟಾಂಡ್ ವಿಜಯಾ, ಗೌರೀಶ್ ಯಾನೆ ಗೌರಿ ಎಂಬವರನ್ನು ಕೊಲೆ ಮಾಡಲು ಸಂಚು ಹೂಡಿದ್ದರು ಎಂದು ಪ್ರಕರಣ ದಾಖಲಿಸಿರುವ ಪೊಲೀಸರು ತಿಳಿಸಿದ್ದಾರೆ.

ಆಕಾಶಭವನ ಶರಣ್‌ನ ಎದುರಾಳಿ ಗ್ಯಾಂಗ್‌ನಲ್ಲಿರುವ ಬಜಾಲ್ ಕುಂಟಲ ನಿವಾಸಿ ಗೌರೀಶ್ ಸುಜೀತ್ ಗೌರಿ(30)ಯ ಮೇಲೆ ಮಂಗಳೂರು ಗ್ರಾಮಾಂತರ-2 ಕಾವೂರು-4, ಬರ್ಕೆ-3, ಉಳ್ಳಾಲ-1, ಕಂಕನಾಡಿ ನಗರ -2 ಸಹಿತ 11 ಪ್ರಕರಣಗಳು ದಾಖಲಾಗಿದೆ. ಅಲ್ಲದೆ ಬರ್ಕೆ, ಕಾವೂರು, ಕಂಕನಾಡಿ ನಗರ ಠಾಣೆಯಲ್ಲಿ ಈತನ ವಿರುದ್ಧ ರೌಡಿ ಶೀಟರ್ ದಾಖಲಾಗಿದೆ.

ಈತನು ಮೊದಲು ಆಕಾಶಭವನ ಶರಣ್ ಗ್ಯಾಂಗ್‌ನಲ್ಲಿದ್ದ. ಬಳಿಕ ಹಣಕಾಸಿನ ವೈಮನಸ್ಸಿನಿಂದ ಆ ಗ್ಯಾಂಗ್‌ನಿಂದ ಹೊರಬಂದು ತನ್ನದೇ ಆದ ಗ್ಯಾಂಗ್ ಕಟ್ಟಿಕೊಟ್ಟಿಕೊಂಡಿದ್ದ. ಹಾಗಾಗಿ ಇವರ ಮಧ್ಯೆ ವೈಮನಸ್ಸು ಉಂಟಾಗಿದ್ದು, ಪರಸ್ಪರ ಕೊಲೆ ಮಾಡಲು ಸ್ಕೆಚ್ ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಾ.17ರಂದು ಕುಲಶೇಖರ ಕಟ್ಟೆಯ ಬಳಿ ದರೋಡೆಗೈದು ನಾಲ್ಕು ಮಂದಿ ಆರೋಪಿಗಳು ಸಿಕ್ಕಿಬಿದ್ದಿದ್ದರು. ಅವರೆಲ್ಲರೂ ನೀಡಿದ ಮಾಹಿತಿಯಂತೆ ಉಳಿದ ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಇದರಲ್ಲಿ ಮಧ್ಯಪ್ರದೇಶದ ರಾಜೇಶ್ ಥೋಮರ್ ಎಂಬಾತ ಈ ಗ್ಯಾಂಗ್‌ಗೆ ಮಾರಕಾಸ್ತ್ರ ಪೂರೈಕೆ ಮಾಡಿದ್ದ. ಈತನು 2016ರಲ್ಲಿ ಕಟೀಲಿನಲ್ಲಿ ನಡೆದ ದರೋಡೆ ಪ್ರಕರಣದ ಆರೋಪಿಯೂ ಆಗಿದ್ದ. ರಾಕೇಶ್ ಕಂಬಳಿಯ ಮೇಲೆ ಮಣಿಪಾಲ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿದೆ. ರಾಜೇಶ್ ಆಚಾರ್ಯನ ಮೇಲೆ ಬಜ್ಪೆ ಠಾಣೆಯಲ್ಲಿ ಹಲ್ಲೆ ಮತ್ತು ಕೊಲೆಯತ್ನ ಪ್ರಕರಣ ದಾಖಲಾಗಿದೆ.

ಬಂಧಿತ ಐವರನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದು ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

Comments are closed.