ಕರಾವಳಿ

ಬ್ರಹ್ಮಾವರ: ವಲಸೆ ಕಾರ್ಮಿಕರಿದ್ದ ವಾಹನ ಪಲ್ಟಿ- ಮಕ್ಕಳು ಸೇರಿ‌ ಹಲವರಿಗೆ ಗಾಯ

Pinterest LinkedIn Tumblr

ಉಡುಪಿ: ವಲಸೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಮಹೀಂದ್ರ ವ್ಯಾನ್ ಮಾದರಿ ವಾಹನ ಪಲ್ಟಿಯಾದ ಪರಿಣಾಮ ಅದರೊಳಗಿದ್ದ ಮಕ್ಕಳು ಸಹಿತ ಹಲವರಿಗೆ ಗಾಯಗಳಾಗಿದ್ದು ಕೆಲವರ ಸ್ಥಿತಿ ಗಂಭೀರವಾಗಿದೆ. ಭಾನುವಾರ ಸಂಜೆ 7.30ರ ಹೊತ್ತಿಗೆ ಬ್ರಹ್ಮಾವರದ ಹೇರೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ.

ಗಾಯಳುಗಳೆಲ್ಲರೂ ಕೂಡ ವಲಸೆ ಕಾರ್ಮಿಕರಾಗಿದ್ದು ಕಾಂಕ್ರಿಟ್ ಕೆಲಸ ಮುಗಿಸಿ ವಾಹನದಲ್ಲಿ ಉಡುಪಿಯತ್ತ ತೆರಳುತ್ತಿದ್ದರು‌. ವಾಹನದ ಚಾಲಕ ಹೇಳುವ ಪ್ರಕಾರ ಟಯರ್ ಸ್ಫೊಟಗೊಂಡು ನಿಯಂತ್ರಣ ಕಳೆದುಕೊಂಡ ವಾಹನ ಪಲ್ಟಿಯಾಗಿದೆ ಎನ್ನುವ ಮಾಹಿತಿ ನೀಡಿದ್ದಾನೆ.

ವಾಹನದಲ್ಲಿ ವಲಸೆ ಕಾರ್ಮಿಕರ ಮಕ್ಕಳು ಸಹಿತ, ಮಹಿಳೆಯರು, ಪುರುಷರನ್ನೊಳಗೊಂಡ 10-15 ಮಂದಿ ತಂಡ ತೆರಳುತ್ತಿದ್ದು ಜನರೇಟರ್ ವಾಹನ, ಕಾಂಕ್ರಿಟ್ ಮಿಕ್ಸಿಂಗ್ ಮೆಷಿನ್ ಕೂಡ ಅದೇ ವಾಹನದಲ್ಲಿತ್ತು. ಏಕಾಏಕಿ ವಾಹನ ಪಲ್ಟಿಯಾದ್ದರಿಂದ ಹಲವರು ವಾಹನದಡಿಗೆ ಸಿಲುಕಿಕೊಂಡಿದ್ದರು. ಇಕ್ಕಾಟಾದ ಜಾಗದಲ್ಲಿದ್ದರಿಂದ ಅವರನ್ನು ರಕ್ಷಿಸುವುದು ಹರಸಾಹಸವಾಗಿತ್ತು. ಮಕ್ಕಳು ಹಾಗೂ ಮಹಿಳೆಯರ ಚೀರಾಟ ಕರಳು ಹಿಂಡುವಂತಿತ್ತು. ಸ್ಥಳೀಯರು ಹಾಗೂ ಇತರ ವಾಹನ ಸವಾರರು‌ ಅವರನ್ನು ರಕ್ಷಿಸಿ ಅಂಬುಲೆನ್ಸ್ ಹಾಗೂ ಖಾಸಗಿ ವಾಹನದ ಮೂಲಕ ಆಸ್ಪತ್ರೆಗೆ ಸಾಗಿಸಲು ನೆರವಾಗಿ ಮಾನವೀಯತೆ ಮೆರೆದರು. ಗಾಯಾಳುಗಳನ್ನು ಉಡುಪಿ ಆಸ್ಪತ್ರೆಗೆ ರವಾನಿಸಲಾಗಿದೆ.

ಇದೇ ವೇಳೆ ಸ್ಪಂದಿಸದ ಪೊಲೀಸ್ ತುರ್ತು ಸ್ಪಂದನಾ ವಾಹನದ ವಿರುದ್ಧ ಸಾರ್ವಜನಿಕರು ಆಕ್ರೋಷ ವ್ಯಕ್ತಪಡಿಸಿದರು‌‌. ಅಲ್ಲದೆ ಬೇಜವಬ್ದಾರಿಯುತವಾಗಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಸಂಬಂದಪಟ್ಟವರು ಹಾಗೂ ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಬ್ರಹ್ಮಾವರ ಪೊಲೀಸರು ಹಾಗೂ ಹೈವೆ ಪಟ್ರೋಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳ ವಿವರ ಇನ್ನಷ್ಟೆ ಲಭ್ಯವಾಗಬೇಕಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.