ಮಂಗಳೂರು ಏಪ್ರಿಲ್ 06 : ಡಾ. ಬಾಬು ಜಗಜೀವನ ರಾಮ್ ರವರು ಸ್ವಾತಂತ್ರ ಹೋರಾಟಗಾರರು, ಸಮಾಜ ಸೇವಕರಾಗಿದ್ದರಲ್ಲದೇ, ಅಸ್ಪ್ರಶ್ಯತೆಯನ್ನು ಹೋಗಲಾಡಿಸಲು ಹೋರಾಡಿದ ಮಹಾನ್ ವ್ಯಕ್ತಿಯಾಗಿದ್ದರು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ. ಕೆ. ವಿ ತಿಳಿಸಿದರು.
ಅವರು ನಗರದ ಜಿಲ್ಲಾಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ ಹಾಗೂ ಸಮಾಜಕಲ್ಯಾಣ ಇಲಾಖೆ ಮಂಗಳೂರು ರವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ ರಾಂ ರವರ 114ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಅಪರಿಮಿತ ಆಹಾರ ಉತ್ಪಾದನೆಯಾಗುವುದರಿಂದ ಜನತೆಯ ಹಸಿವನ್ನು ನೀಗಿಸಬಹುದು ಎಂಬ ವಿಚಾರದಿಂದ ಡಾ. ಬಾಬು ಜಗಜೀವನ ರಾಮ್ ಅವರು ಹಸಿರು ಕ್ರಾಂತಿಯ ಯೋಜನೆಯನ್ನು ಜಾರಿಗೆ ತಂದು ಹಸಿರು ಕ್ರಾತಿಯ ಹರಿಕಾರ ಎಂದು ಹೆಸರುವಾಸಿಯಾದ್ದರು. ಇವರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕೃಷಿ ಸಚಿವರಾಗಿ ದೇಶಕ್ಕೆ ಅಪಾರ ಸೇವೆ ಸಲ್ಲಿಸಿರುವುದಲ್ಲದೇ ಕೇಂದ್ರ ರಕ್ಷಣಾ ಸಚಿವರಾಗಿ ಸಾಧನೆ ಮಾಡಿದ್ದಾರೆ ರೈತ, ಯೋಧರ ಬಗ್ಗೆಅಪಾರ ಕಾಳಜಿಹೊಂದಿ ಅವರ ಏಳಿಗಗೆಗೆ ಸಾಕಷ್ಟು ಶ್ರಮಿಸಿದ್ದಾರೆ ಎಂದರು.
ಕೃಷಿ, ರಕ್ಷಣಾ ವಲಯದಲ್ಲಿ ಅವರ ಮಾರ್ಗದರ್ಶನ ಹಾಗೂ ನಾಯಕತ್ವವನ್ನು ಅನುಕರಣೆ ಮಾಡಿರುವುದಲ್ಲದೇ ಅವರು ದೇಶ ಕಂಡ ಅಪರೂಪದ ಮಹಾನ್ ರಾಷ್ಟ್ರ ನಾಯಕರಾಗಿದ್ದರು. ಶೋಷಿತರ ಹಕ್ಕುಗಳಿಗಾಗಿ ನಿರಂತರ ಹೋರಾಡಿ ಅವರ ಏಳಿಗೆಗಾಗಿ ದುಡಿಯುವುದರೊಂದಿಗೆ ಶೋಷಿತರ ಆಶಾಕಿರಣವಾಗಿದ್ದರು ಎಂದರು.
ಯುವ ಪೀಳಿಗೆಯು ಡಾ. ಬಾಬು ಜಗಜೀವನ ರಾಮ್ ಅವರ ಕುರಿತು ಹೆಚ್ಚು ಹೆಚ್ಚು ಅಧ್ಯಯನ ಮಾಡಿ, ಅವರ ಆದರ್ಶಗಳನ್ನು ಅನುಸರಿಸಬೇಕು ಹಾಗೂ ಸಾಮಾಜಿಕ ಮತ್ತು ರಾಜಕೀಯ ವಿಚಾರಧಾರೆಗಳನ್ನು ತಮ್ಮಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಸಮಾಜದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಬಲರಾಗುವುದರೊಂದಿಗೆ ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು, ದೇಶದ ಸುವ್ಯವಸ್ಥೆಯನ್ನು ಕಾಪಾಡುವ ಕಾರ್ಯವನ್ನು ಮಾಡಬೇಕು ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಬಾಬು ಜಗಜೀವನ ರಾಂ ರವರು ಅಸ್ಪ್ರಶ್ಯತೆಯನ್ನು ತೊಡೆದು ಹಾಕಿ ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದರು. ಶೋಷಿತರ ಪರವಾಗಿ ಹೋರಾಟ ಮಾಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಯಶಸ್ವಿಯಾಗಿದ್ದರು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಕುಮಾರ್ ಮಾತನಾಡಿ, ಡಾ. ಬಾಬು ಜಗಜೀವನ್ ರಾಂ ಅವರ ಆದರ್ಶಗಳು, ಸಾಧನೆಗಳು ಮತ್ತು ಜಿಂತನೆಗಳು ಯುವ ಜನರಿಗೆ ತಲುಪುವಂತಾಗಬೇಕು ಹಾಗೂ ಅವರ ವಿಚಾರಧಾರೆಗಳನ್ನು ಯುವಜನತೆ ಪಾಲಿಸುವುದರಿಂದ ಸಮಾಜವು ಅಭಿವೃದ್ಧಿ ಪಥದೆಡೆಗೆ ಸಾಗುತ್ತದೆ ಎಂದ ಅವರು, ಶೋಷಣೆಗೊಳಗಾದ ಅಸ್ಪ್ರಶ್ಯರು ಬದುಕಿನಲ್ಲಿ ಎಲ್ಲರಂತೆ ನೆಲೆಯೂರುವಂತೆ ಮಾಡಿದ್ದಾರೆ. ಹಲವಾರು ನೂತನ ಕಾರ್ಮಿಕ ಕಾಯ್ದೆಗಳನ್ನು ಜಾರಿಗೊಳಿಸಿ ಕಾರ್ಮಿಕರ ಬದುಕನ್ನು ಸುಧಾರಣೆ ಮಾಡಿದ್ದಾರೆ ಎಂದರು.
ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಡಾ. ಬಾಬು ಜಗಜೀವನ ರಾಮ್ ಅವರು ಸಾಮಾಜಿಕ ಆದರ್ಶ ಪಾಲನೆ ನಮ್ಮೆಲ್ಲರಿಂದ ಆಗಬೇಕು. ಯುವ ಪೀಳಿಗೆಯು ಅವರ ಆದರ್ಶಗಳನ್ನು ಪಾಲನೆ ಮಾಡುವುದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗತ್ತದೆ ಎಂದರು.
ಇದೇ ಸಂದರ್ಭದಲ್ಲಿ ನಗರದ ಕೊಡಿಯಾಲ್ ಬೈಲ್ ನಲ್ಲಿ 985.00 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಹಾನಗರ ಪಾಲಿಕೆ ಉಪ ಮೇಯರ್ ಸುಮಂಗಳಾ ರಾವ್, ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಮಮತಾ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಯೋಗೇಶ್, ಎಸ್. ಬಿ. ಹಾಗೂ ಮತ್ತಿತರ ಮಹಾನಗರ ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು.
Comments are closed.